12 ವರ್ಷದ ಬಾಲಕಿ ಮೇಲೆ ಐವರು ಬಾಲಕರು ಶಾಲೆಯಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದೂ ಅಲ್ಲದೇ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುರ್ದಾಬಾದ್ ನಲ್ಲಿ ನಡೆದಿದೆ.
ಮುರ್ದಾಬಾದ್ ಜಿಲ್ಲೆಯ ಒಂದೇ ಪ್ರದೇಶದಲ್ಲಿ ಸಂತ್ರಸ್ತೆ ಹಾಗೂ ಆರೋಪಿಗಳು ವಾಸವಾಗಿದ್ದು, ಎಲ್ಲಾ 5 ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು 7ರಿಂದ 9ನೇ ತರಗತಿ ವಿದ್ಯಾರ್ಥಿಗಳಾಗಿದ್ದು, 12ರಿಂದ 15 ವರ್ಷ ವಯಸ್ಸಿನವರಾಗಿದ್ದಾರೆ. ಬಾಲಕಿಗೆ ಕೋಲ್ಡ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧ ನೀಡಿ ಪ್ರಜ್ಞೆ ತಪ್ಪಿಸುವ ಮೂಲಕ ಶಾಲೆಯ ಕಟ್ಟಡದಲ್ಲೇ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದೂ ಅಲ್ಲದೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಮೊಬೈಲ್ ನಲ್ಲಿ ವೀಡಿಯೋ ನೋಡಿದ ನೆರೆ ಮನೆಯ ಮಹಿಳೆ ಸಂತ್ರಸ್ತೆ ತಾಯಿಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಎಲ್ಲಾ ಆರೋಪಿಗಳು ಒಂದೇ ಭಾಗದಲ್ಲಿದ್ದು, ಸಂತ್ರಸ್ತೆ ಹಾಗೂ ಆರೋಪಿಗಳು ದಲಿತ ಸಮುದಾಯಕ್ಕೆ ಸೇರಿದ್ದಾರೆ. ಆರೋಪಿಗಳನ್ನು ಬಾಲಪರಾಧಿಗಳೆಂದು ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನ ತಂದೆ ಶಾಲೆಯ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದು, ಶಾಲೆಯ ಕೀಗಳು ಇವರ ಬಳಿ ಇತ್ತು. ಇದನ್ನು ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.



