ಪತ್ನಿ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಇಬ್ಬರು ಮಕ್ಕಳಿಗೆ ವಿಷಹಾಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಸೂರತ್ ನಗರದ ದಿಂಡೋಲಿಯ ಶಾಲೆಯ ಶಿಕ್ಷಕ ಅಲ್ಪೇಶ್‌ಭಾಯ್ (41) ತನ್ನ 7 ವರ್ಷ ಹಾಗೂ 2 ವರ್ಷದ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ನಿ ಫಾಲ್ಗುಣಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಫಲ್ಗುಣಿ ಭಾಯಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತಳಾಗಿ ಕೆಲಸ ಮಾಡುತ್ತಿದ್ದು, ಪತಿಗೆ ಕರೆ ಮಾಡಿದಾಗ ಸ್ವೀಕರಿಸದ ಕಾರಣ ಮನೆಗೆ ಬಂದು ನೋಡಿದಾಗ ಬಾಗಿಲುಗಳು ಲಾಕ್ ಆಗಿತ್ತು. ನಂತರ ಪತ್ನಿ ಸಂಬಂಧಿಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಬಂದ ಸಂಬಂಧಿಕರು ಮನೆಯ ಬಾಗಿಲು ಒಡೆದು ಒಳಗೆ ಹೋದಾಗ ಹಾಸಿಗೆಯ ಮೇಲೆ ಇಬ್ಬರು ಮಕ್ಕಳು ಹಾಗೂ ಪಕ್ಕದಲ್ಲೇ ಪತಿ ಕೂಡ ಶವವಾಗಿ ಬಿದ್ದಿದ್ದರು.
ಸೂರತ್‌ನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಜಯ್ ಸಿಂಗ್ ಗುರ್ಜರ್ ಘಟನೆಯ ಮಾಹಿತಿ ನೀಡಿದ್ದು, ಮೃತ ಅಲ್ಪೇಶ್ ಮೊಬೈಲ್‌ನಲ್ಲಿ ಡೆತ್ ನೋಟ್ ಬರೆದಿದ್ದಾರೆ. ಅಲ್ಲದೇ ಕೆಲವು ವೀಡಿಯೋಗಳು ಲಭಿಸಿವೆ. ಅಲ್ಲದೇ ರೂಮ್‌ನಲ್ಲಿ ಎರಡು ಡೈರಿಗಳು ಕೂಡ ಸಿಕ್ಕಿದೆ.
ಅಲ್ಪೇಶ್ ಪತ್ನಿ ಫಲ್ಗುಣಿ ಭಾಯಿ, ನರೇಶ್ ಕುಮಾರ್ ರಾಥೋಡ್ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಇದರಿಂದ ಬೇಸತ್ತ ಅಲ್ಪೇಶ್ ತೀವ್ರ ಒತ್ತಡದಲ್ಲಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಅಲ್ಪೇಶ್ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧರಿಸಿ ಇಬ್ಬರನ್ನೂ ಬಂಧಿಸಲಾಗಿದ್ದು, ಡೈರಿಯಲ್ಲಿ ಅಕ್ರಮ ಸಂಬಂಧದಿಂದ ಮನನೊಂದಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ತನಿಖೆಗಾಗಿ ಡೈರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.



