ಗರ್ಭಿಣಿ ಪತ್ನಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ದೇಹದ ಭಾಗಗಳನ್ನು ಬಿಸಾಡಲು ಹೋದಾಗ ಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಬೆಚ್ಚಿಬೀಳಿಸುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನ ಮೆಡಿಪಲ್ಲಿಯಲ್ಲಿ ಬಾಲಾಜಿ ಹಿಲ್ಸ್ ನಲ್ಲಿ ಈ ಘಟನೆ ನಡೆದಿದ್ದು, ಪತ್ನಿಯ ರುಂಡವನ್ನು ಬಿಸಾಡಿದ್ದ ಗಂಡ, ಕೈ ಹಾಗೂ ಕಾಲುಗಳ ಭಾಗಗಳನ್ನು ಮುಸಿ ನದಿಯಲ್ಲಿ ಬಿಸಾಕಲು ಹೋದಾಗ ಸಿಕ್ಕಿಬಿದ್ದಿದ್ದಾನೆ.
5 ತಿಂಗಳ ಗರ್ಭಿಣಿಯಾಗಿದ್ದ 21 ವರ್ಷದ ಸ್ವಾತಿ ಕೊಲೆಯಾಗಿದ್ದು, ವಿಕಾರಬಾದ್ ಜಿಲ್ಲೆಯ ಕಾಮರೆಡ್ಡಿಗುಡ್ಡದ ನಿವಾಸಿ ಪತಿ ಮಹೇಂದ್ರ ಈ ಕೃತ್ಯ ಎಸಗಿದ್ದಾನೆ. ಪರಸ್ಪರ ಪ್ರೀತಿಸಿ ಮದುವೆ ಆಗಿದ್ದ ಇಬ್ಬರು ಬಾಲಾಜಿ ಹಿಲ್ಸ್ ಗೆ ಬಂದು ನೆಲೆಸಿದ್ದರು.
ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ಶನಿವಾರ ಸಂಜೆ ೪.೩೦ರ ಸುಮಾರಿಗೆ ಪತ್ನಿ ಸ್ವಾತಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ದೇಹವನ್ನು ಬಿಸಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಪತ್ನಿಯನ್ನು ಕೊಲೆ ಮಾಡಿದ ನಂತರ ಸೋದರಿಗೆ ಕರೆ ಮಾಡಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದ. ಸೋದರಿ ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿದಳು. ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದಾಗ ಮಹೇಂದ್ರನನ್ನು ಕರೆಸಿ ವಿಚಾರಣೆ ಮಾಡಿದಾಗ ಎಷ್ಟು ವಿಚಾರಿಸಿದರೂ ತಿರುಗಿ ಮರುಗಿ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಹೇಳುತ್ತಲೇ ಇದ್ದ. ಪೊಲೀಸರು ಪಟ್ಟು ಬಿಡದೇ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ರುಂಡವನ್ನು ಯಾವುದೋ ಜಾಗದಲ್ಲಿ ಬಿಸಾಕಿದ್ದಾಗಿ ಆತ ಹೇಳಿದ್ದು, ನಂತರ ಕೈ ಮತ್ತು ಕಾಲುಗಳನ್ನು ಮುಸಿ ನದಿಯಲ್ಲಿ ಬಿಸಾಕಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಶವದ ಭಾಗಗಳಿಗೆ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಮಹಿಳೆಯ ಸೊಂಟದ ಭಾಗ ಮಾತ್ರ ಲಭ್ಯವಾಗಿದೆ.
ನಮಗೆ ಸೊಂಟದ ಭಾಗ ಮಾತ್ರ ಲಭ್ಯವಾಗಿದ್ದು, ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಿ ಮಹಿಳೆಯ ಗುರುತು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



