ನೇಪಾಳದಲ್ಲಿ ನಡೆದ ಹಿಂಸಾಚಾರದಲ್ಲಿ ಭಾರತೀಯ ಮಹಿಳೆ ಸೇರಿದಂತೆ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
ಭ್ರಷ್ಟಾಚಾರ ವಿರೋಧಿ, ಸಾಮಾಜಿಕ ಜಾಲತಾಣ ನಿಷೇಧ ಸೇರಿದಂತೆ ಹಲವು ವಿಷಯಗಳ ಮೇಲೆ ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು ಪ್ರತಿಭಟನೆಗೆ ಇಳಿದಿದ್ದರು. ಪ್ರತಿಭಟನೆ ಹಿಂಸಾರೂಪ ಪಡೆದ ಕಾರಣ ದೇಶದಲ್ಲಿ ಅರಾಜಕತೆ ಉಂಟಾಗಿತ್ತು.
ನೇಪಾಳದಲ್ಲಿ ಹಂಗಾಮಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದು, ಶುಕ್ರವಾರ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಹಂಗಾಮಿ ಪ್ರಧಾನಿ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ಏರ್ಪಟ್ಟಿದೆ.
ಈ ಎಲ್ಲಾ ಘಟನೆಗಳ ನಡುವೆ ಹೋಟೆಲ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಕಾರಣ ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹಯಾತ್ ನಲ್ಲಿ ಹೋಟೆಲ್ ಗೆ ಬೆಂಕಿ ಹಚ್ಚಿದ್ದರಿಂದ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ರಾಜೇಶ್ ಗೋಲಾ ಅಸುನೀಗಿದ್ದಾರೆ.
ನೇಪಾಳದಲ್ಲಿ ಸಿಲುಕಿದ್ದ 140 ಭಾರತೀಯರನ್ನು ವಿಶೇಷ ವಿಮಾನ ಮೂಲಕ ವಾಪಸ್ ಕರೆಸಿಕೊಳ್ಳಲಾಗಿದೆ. ಟೂರ್ನಿಗೆ ತೆರಳಿದ್ದ ಭಾರತೀಯ ವಾಲಿಬಾಲ್ ತಂಡ ಕೂಡ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ರಾಯಭಾರ ಕಚೇರಿಯಲ್ಲಿ ಇರಿಸಲಾಗಿದೆ.
ದೆಹಲಿ ಮತ್ತು ನೇಪಾಳ ಮಧ್ಯೆ ಸಂಚರಿಸುತ್ತಿದ್ದ ಬಸ್ ಕಠ್ಮಂಡುವಿನಲ್ಲಿ ಸಿಲುಕಿದ್ದು, ಅಯೋಧ್ಯೆಯಿಂದ ಮಾನಸ ಸರೋವರ ಯಾತ್ರೆಗೆ ತೆರಳುತ್ತಿದ್ದ 8 ಯಾತ್ರಿಗಳು ಸಿಲುಕಿದ್ದಾರೆ.



