ಚಾಮರಾಜನಗರ:ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಪಚ್ಚೆದೊಡ್ಡಿ ತಾಂಡಾದ ಪಚ್ಚೆಮಲ್ಲು ಹಾಗೂ ಮಂಜುನಾಥನನ್ನು ಹನೂರು ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಹುಲಿಗೆ ವಿಷಪ್ರಾಶನ ಮಾಡಿ ಕೊಂದಿರುವುದಾಗಿ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ನಡೆದಿರುವ ಮತ್ತೊಂದು ಹುಲಿ ಹತ್ಯೆಯಿಂದ ತುಂಬಾ ನೋವಾಗಿದೆ ಎಂದಿದ್ದಾರೆ.
ಈಗಾಗಲೇ ಹನೂರು ವಲಯ ಅರಣ್ಯಾಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತು ಪ್ರಾಥಮಿಕ ಮಾಹಿತಿ ಪ್ರಕಾರ ಹುಲಿಗೆ ವಿಷಪ್ರಾಶನ ಮಾಡಿ ಕೊಂದಿರುವುದಾಗಿ ತಿಳಿದುಬಂದಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ವಶಕ್ಕೆ ಪಡೆದಿರುವ ಶಂಕಿತ ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೃತ್ಯದಲ್ಲಿ ಯಾರೆಲ್ಲಾ ಸಾಥ್ ನೀಡಿದ್ದಾರೆ, ಹುಲಿಯನ್ನು ಕೊಂದಿದ್ದು ಹೇಗೆ ಎಂಬುದರ ಕುರಿತು ವಿಚಾರಣೆ ಮಾಡಲಾಗುತ್ತಿದೆ.
ಇನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಬೆನ್ನಲ್ಲೇ ಹುಲಿ ಹತ್ಯೆ ಸ್ಥಳಕ್ಕೆ ಪಿಸಿಸಿಎಫ್ ಸ್ಮಿತಾ ನೇತೃತ್ವದ ತಂಡ ಭೇಟಿ ನೀಡಿ, ಹುಲಿ ಕಳೇಬರ ಸಿಕ್ಕ ಸ್ಥಳಗಳನ್ನು ಜಾಲಾಡಿದ್ದಾರೆ. ಸಚಿವರ ಸೂಚನೆಯಂತೆ ಪಿಸಿಸಿಎಫ್ ಸ್ಮಿತಾ ತಂಡ ಎಂಟು ದಿನದ ಒಳಗೆ ವರದಿ ಸಲ್ಲಿಸಲಿದ್ದಾರೆ.
ನಡೆದದ್ದೇನು?
ಐದು ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದ ಪ್ರಕರಣ ಮಾಸುವ ಮುನ್ನವೇ, ಮಲೆ ಮಹದೇಶ್ವರನ ಪುಣ್ಯ ಭೂಮಿಯಲ್ಲಿ ನಿನ್ನೆ ಮತ್ತೊಂದು ಹೇಯ ಕೃತ್ಯ ನಡೆದಿದೆ. ವನ್ಯಜೀವಿಧಾಮದ ಹನೂರು ವಲಯದಲ್ಲಿ 12 ವರ್ಷದ ಗಂಡು ಹುಲಿಯನ್ನ ಕೊಂದು ಹಾಕಿದ್ದಾರೆ. ಹುಲಿಯ ಕಳೇಬರವನ್ನ ಕೊಡಲಿಯಿಂದ ಕೊಚ್ಚಿ, 3 ಭಾಗಗಳನ್ನ ಮಾಡಿ 3 ಕಡೆ ಎಸೆದು ಹೋಗಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾಂಗಗಳನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ.



