ಮಧ್ಯಮ ಕ್ರಮಾಂಕದಲ್ಲಿ ಕರಣ್ ನಾಯರ್ ಮತ್ತು ರವಿಚಂದ್ರನ್ ಸ್ಮರಣ್ ಸಿಡಿಸಿದ ದ್ವಿಶತಕಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕೇರಳ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.
ಮಂಗಳವಾಪುರಂನಲ್ಲಿ ನಡೆಯುತ್ತಿರುವ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಎರಡನೇ ದಿನವಾದ ಭಾನುವಾರ ಮೊದಲ ಇನಿಂಗ್ಸ್ ನಲ್ಲಿ 167 ಓವರ್ ಗಳಲ್ಲಿ 5 ವಿಕೆಟ್ ಗೆ 586 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ದಿನದಾಂತ್ಯಕ್ಕೆ ಕೇರಳ ತಂಡ 21 ರನ್ ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ.
319 ರನ್ ಗೆ 3 ವಿಕೆಟ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡವನ್ನು ಕರಣ್ ನಾಯರ್ ಮತ್ತು ರವಿಚಂದ್ರನ್ ಸ್ಮರಣ್ 359 ರನ್ ಜೊತೆಯಾಟ ನಿಭಾಯಿಸಿದರು. ಕರಣ್ ನಾಯರ್ 389 ಎಸೆತಗಳಲ್ಲಿ 25 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 233 ರನ್ ಸಿಡಿಸಿದರು. ಸ್ಮರಣ್ 290 ಎಸೆತಗಳಲ್ಲಿ 16 ಬೌಂಡರಿ ಮತ್ತು ೩ ಸಿಕ್ಸರ್ ಸಹಾಯದಿಂದ 220 ರನ್ ಚಚ್ಚಿ ಅಜೇಯರಾಗಿ ಉಳಿದರು.



