ವಿಶ್ವಬ್ಯಾಂಕ್ ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದ 14,000 ಕೋಟಿ ರೂ. ಹಣವನ್ನು ಬಿಹಾರ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಳಸಿದ್ದಾರೆ ಎಂದು ರಾಜಕೀಯ ತಂತ್ರಗಾರಿಕೆ ತಜ್ಞ ಹಾಗೂ ಜನ ಸೂರಜ್ ಪಕ್ಷ ಮುಖಂಡ ಪ್ರಶಾಂತ್ ಕಿಶೋರ್ ಗಂಭೀರ ಆರೋಪಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ ಸೂರಜ್ ಪಕ್ಷ ಒಂದೂ ಸ್ಥಾನ ಗೆಲ್ಲದೇ ನಿರಾಸೆ ಮೂಡಿಸಿತ್ತು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಪ್ರಶಾಂತ್ ಕಿಶೋರ್, ಬಿಹಾರ ವಿಧಾನಸಭಾ ಚುನಾವಣೆ ಆರಂಭವಾದಾಗಿನಿಂದ ಮತದಾನದ ದಿನದವರೆಗೂ ಎನ್ ಡಿಎ 40,000 ಕೋಟಿ ರೂ. ವೆಚ್ಚ ಮಾಡಿದೆ. ಉಚಿತ ಹಾಗೂ ಉಡುಗೊರೆಗಳನ್ನು ನೀಡಿ ಮತದಾರರನ್ನು ಸೆಳೆಯಲಾಗಿದೆ ಎಂದರು.
ವಿಶ್ವಬ್ಯಾಂಕ್‌ನ 14,000 ಕೋಟಿ ಹಣವನ್ನು ಚುನಾವಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಮತದಾರರನ್ನು ಖರೀದಿಸಲು ನಿತೀಶ್ ಕುಮಾರ್ ಬಣ ಬಳಸಿಕೊಂಡಿದೆ ಎಂದು ಪ್ರಶಾಂತ್ ಕಿಶೋರ್ ಆರೋಪಿಸಿದರು.
ಮುಖ್ಯಮಂತ್ರಿ ಮಹಿಳಾ ರೋಜ್ ಗರ್ ಯೋಜನೆಯ 10,000 ಕೋಟಿ ರೂ. ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಯೋಜನೆಯನ್ನು ಕೂಡ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದರು.



