ಸೀರೆ ವಿಷಯದಲ್ಲಿ ನಡೆದ ಜಗಳದಿಂದ ಮದುವೆಗೆ ಕೆಲವೇ ಗಂಟೆಗಳ ಮುನ್ನ ವಧುವನ್ನು ಆಕೆಯ ಮನೆಯಲ್ಲೇ ವರ ಕೊಲೆ ಮಾಡಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಭಾವನಗರ್ ನಗರದ ಪ್ರಭುದಾಸ್ ಕೆರೆ ಬಳಿಯ ಟೆಕ್ರಿ ಚೌಕ್ ಬಳಿ ಶನಿವಾರ ಮದುವೆ ನಿಗದಿಯಾಗಿದ್ದು, ಕೊಲೆಯಾದ ವಧು ಸೋನಿ ಹಿಮತ್ ರಾಥೋಡ್ ಮತ್ತು ವರ ಸಂಜನ್ ಭಾರಿಯಾ ಕಳೆದ ಒಂದೂವರೆ ವರ್ಷದಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು.
ಮದುವೆಗೆ ಎಲ್ಲಾ ಸಿದ್ಧತೆಗಳು ಮುಗಿದಿದ್ದು, ಬಹುತೇಕ ಸಂಪ್ರದಾಯಗಳು ಮುಗಿದಿದ್ದು, ಶನಿವಾರ ರಾತ್ರಿ ಮುದವೆ ಆಗಬೇಕಿತ್ತು. ಆದರೆ ಮದುವೆಗೆ ಕೇವಲ ಒಂದು ಗಂಟೆ ಬಾಕಿ ಇದೆ ಎನ್ನುವಾಗ ಸೀರೆ ಮತ್ತು ಹಣದ ವಿಷಯದಲ್ಲಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು ಕೊಲೆಯಲ್ಲಿ ಅಂತ್ಯಗೊಂಡಿದೆ.
ಸಂಜಯ್ ಕಬ್ಬಿಣದ ಪೈಪ್ ನಿಂದ ಸೋನಿಯ ತಲೆಗೆ ಹೊಡೆದು ನಂತರ ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ನಂತರ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಮಾಡಿ ಪರಾರಿಯಾಗಿದ್ದಾನೆ.
ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ವಧುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪೊಲೀಸರು ಸಮಗ್ರ ತನಿಖೆಗೆ ಮುಂದಾಗಿದ್ದಾರೆ.



