ಹೊಸ ವರ್ಷಾಚರಣೆ ವೇಳೆ ನಾಗರಿಕರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆ ವೇಳೆ ನೆದರ್ಲೆಂಡ್ಸ್ ನ 19ನೇ ಶತಮಾನದ ಆಮ್ ಸ್ಟ್ರಮ್ ಚರ್ಚ್ ಅಗ್ನಿಗೆ ಆಹುತಿಯಾಗಿದೆ.
ನೆದರ್ಲೆಂಡ್ ನ ವಂಡೆಲಾಕ್ಲಾರ್ಕ್ ನಲ್ಲಿರುವ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದ 1892ರಲ್ಲಿ ನಿರ್ಮಾಣವಾದ ಆಮ್ ಸ್ಟ್ರಮ್ ಚರ್ಚ್ ಗೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದರಿಂದ ಉರಿದು ಭಸ್ಮವಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
164 ಅಡಿ ಎತ್ತರದ ಮೇಲ್ಫಾವಣಿ ಅಗ್ನಿ ಸ್ಪರ್ಶದಿಂದ ಕುಸಿದು ಬಿದ್ದಿದೆ. ಕಟ್ಟಡದ ಒಳಗೆ ಸಾಕಷ್ಟು ಹಾನಿಯಾಗಿದ್ದು, ಮೂಲಸ್ವರೂಪಕ್ಕೆ ಧಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.
ಡಚ್ ಪೊಲೀಸ್ ಒಕ್ಕೂಟದ ಮುಖ್ಯಸ್ಥೆ ನೈನ್ ಕೂಯ್ಮನ್, ಹೊಸ ವರ್ಷದ ಮುನ್ನಾದಿನದಂದು ಪೊಲೀಸ್ ಮತ್ತು ತುರ್ತು ಸೇವೆ ವಿರುದ್ಧ ನಾಗರಿಕರು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಆಮ್ ಸ್ಟ್ರಮ್ ಡ್ಯಾಮ್ ಚರ್ಚ್ ಮೇಲೆ ಪಟಾಕಿ ಹಾಗೂ ಸ್ಫೋಟಕಗಳನ್ನು ಕಿಡಿಗೇಡಿಗಳು ಮೂರು ಬಾರಿ ಎಸೆದಿದ್ದರಿಂದ ಕೆಲಸ ಮಾಡುತ್ತಿದ್ದ ಇಬ್ಬರು ಅಸುನೀಗಿದ್ದಾರೆ. 17 ವರ್ಷದ ಬಾಲಕ ಮತ್ತು 38 ವರ್ಷದ ವ್ಯಕ್ತಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇತರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಧ್ಯರಾತ್ರಿ ವೇಳೆ ಜೀವಹಾನಿ ಹೊರತುಪಡಿಸಿ ಇತರೆ ಯಾವುದೇ ತುರ್ತು ಸೇವೆಗಳಿಗೆ ಕರೆ ಮಾಡಬೇಡಿ ಎಂದು ಪೊಲೀಸರು ಹಾಗೂ ತುರ್ತು ಸೇವಾ ಸಂಸ್ಥೆಗಳು ನಾಗರಿಕರಿಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ತಿರುಗಿದ್ದು ಹಿಂಸಾರೂಪ ಪಡೆಯಿತು ಎಂದು ಹೇಳಲಾಗಿದೆ.
ರೋಟರ್‌ಡ್ಯಾಮ್‌ನಲ್ಲಿರುವ ಕಣ್ಣಿನ ಆಸ್ಪತ್ರೆಯು 10 ಮಕ್ಕಳು ಸೇರಿದಂತೆ 14 ರೋಗಿಗಳಿಗೆ ಕಣ್ಣಿನ ಗಾಯಗಳಿಗೆ ಚಿಕಿತ್ಸೆ ನೀಡಿರುವುದಾಗಿ ಹೇಳಿದೆ. ಇಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಅನಧಿಕೃತ ಪಟಾಕಿಗಳ ಮೇಲೆ ನಿರೀಕ್ಷಿತ ನಿಷೇಧ ಹೇರುವ ಮೊದಲು ಇದು ಕೊನೆಯ ವರ್ಷವಾಗಿತ್ತು, ಆದ್ದರಿಂದ ಡಚ್ಚರು ಅವುಗಳನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸಿ ಹೊಸ ವರ್ಷಾಚರಣೆ ವೇಳೆ ಸಂಭ್ರಮಿಸಲು ಉದ್ದೇಶಿಸಿದ್ದರು.
ಡಚ್ ಪೈರೋಟೆಕ್ನಿಕ್ಸ್ ಅಸೋಸಿಯೇಷನ್ ಪ್ರಕಾರ, ದಾಖಲೆಯ 129 ಮಿಲಿಯನ್ ಯುರೋಗಳನ್ನು ($151 ಮಿಲಿಯನ್) ಪಟಾಕಿಗೆ ಸಾರ್ವಜನಿಕರು ಖರ್ಚು ಮಾಡಿದ್ದಾರೆ. ಕೆಲವು ಪ್ರದೇಶಗಳನ್ನು ಪಟಾಕಿ ಮುಕ್ತ ವಲಯಗಳಾಗಿ ಗೊತ್ತುಪಡಿಸಲಾಗಿತ್ತು, ಆದರೆ ಇದು ಕಡಿಮೆ ಪರಿಣಾಮ ಬೀರುವಂತೆ ಕಂಡುಬಂದಿದೆ.



