ಯಾದಗಿರಿ: ಸಿಸಿಎಲ್ ಪಂದ್ಯ ಮುಗಿಸಿ ಹೈದರಾಬಾದ್ನಿಂದ ಊರಿಗೆ ಬರುತ್ತಿದ್ದ ಮಾಜಿ ಸಚಿವ ರಾಜು ಗೌಡ ಅವರ ಕಾರು ಗಂಜ್ ಪ್ರದೇಶದ ಹೆದ್ದಾರಿಯಲ್ಲಿ ಅಪಘಾತಕ್ಕಿಡಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಂಧ್ರದ ವಿಶಾಖಪಟ್ಟಣದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯ ಮುಗಿಸಿ, ಹೈದರಾಬಾದ್ ಮಾರ್ಗದ ಮೂಲಕ ಹಿಂತಿರುವಾಗ ಅಪಘಾತ ಸಂಭವಿಸಿದೆ.
ನಗರದ ಗಂಜ್ ಪ್ರದೇಶದ ಹೈವೇನಲ್ಲಿ ಟ್ರಕ್ ಒಂದು ಇವರ ಕಾರಿಗೆ ಹಿಂದಿನಿಂದ ಗುದ್ದಿದೆ. ಕಾರಿನ ಹಿಂಭಾಗ ಸಂಪೂರ್ಣ ನುಜ್ಜು, ಗುಜ್ಜಾಗಿದ್ದು, ರಾಜೂ ಗೌಡ ಅವರಿಗೆ ಸ್ವಲ್ಪ ತರಚಿದ ಗಾಯಗಳಾಗಿವೆ. ಪ್ರಥಮ ಚಿಕಿತ್ಸೆ ಪಡೆದು ವಾಪಸ್ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ರಾಜುಗೌಡ ಅವರು, ಶನಿವಾರ ಮುಂಜಾನೆ ನಮ್ಮ ಕಾರು ಅಪಘಾತಕ್ಕೀಡಾಗಿತ್ತು. ಕಾರಿನ ಫೋಟೊಗಳು ನೋಡಿ ನಮ್ಮ ಕಾರ್ಯಕರ್ತರು ಆತಂಕಗೊಂಡಿದ್ದರು. ಬಹಳಷ್ಟು ಜನ ಫೋನ್ ಮಾಡುತ್ತಿದ್ದಾರೆ. ಆದರೆ, ಅಪಘಾತದಲ್ಲಿ ನನಗೆ ಏನೂ ಆಗಿಲ್ಲ, ಆ ದೇವರು ಜನರ ಆಶೀರ್ವಾದದಿಂದ ನಾನು ಸುರಕ್ಷಿತವಾಗಿದ್ದೇನೆ.
2 ಬಾರಿ ಡಿಕ್ಕಿ ಹೊಡೆದ ಟಿಪ್ಪರ್ ಹಿಂದೆ ಅನುಮಾನದ ಹುತ್ತ
ಮಾಜಿ ಸಚಿವ ರಾಜುಗೌಡ ಕಾರು ಅಪಘಾತ ಪ್ರಕರಣದಲ್ಲಿ ಇದೀಗ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಟಿಪ್ಪರ್ ಚಾಲಕನ ನಿರ್ಲಕ್ಷ್ಯ, ಅತೀವೇಗದ ಜೊತೆಗೆ ಅಪಘಾತವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯಾ ಅನ್ನೋ ಅನುಮಾನ ಕಾಡತೊಡಗಿದೆ. ಇದರ ಬೆನ್ನಲ್ಲೇ ಅಪಘಾತದ ಬಗ್ಗೆ ಇರುವ ಅನುಮಾನ ಕುರಿತು ಪ್ರಕರಣ ದಾಖಲಾಗಿದೆ. ನಿಖರ ಕಾರಣ ಪತ್ತೆ ಹಚ್ಚುವಂತೆ ದೂರಿನಲ್ಲಿ ಉಲ್ಲೇಖಸಲಾಗಿದೆ. ಇಷ್ಟೇ ಅಲ್ಲ ಈ ಅನುಮಾನಕ್ಕೆ ಕಾರಣವೇನು ಅನ್ನೋದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಸಚಿವ ರಾಜುಗೌಡ ಅವರ ಸಂಬಂಧಿ ಭೀಮುನಾಯಕ ನೀಡಿದ್ದ ದೂರಿನ ಮೇಲೆ ಟಿಪ್ಪರ್ ಚಾಲಕ ಮಾಲಿಕಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಮುಖವಾಗಿ ಮಾಜಿ ಸಚಿವ ರಾಜುಗೌಡ ತೆರಳುತ್ತಿದ್ದ ಕಾರಿಗೆ ಟಿಪ್ಪರ್ ಹಿಂಬದಿಯಿಂದ ಎರಡು ಬಾರಿ ಡಿಕ್ಕಿಯಾಗಿದೆ.
ಹೈದ್ರಾಬಾದ್ ನಿಂದ ಯಾದಗಿರಿ ಜಿಲ್ಲೆಯ ಕೊಡೇಕಲ್ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅತಿವೇಗವಾಗಿ ನಿರ್ಲಕ್ಷ್ಯತನದಿಂದ ಟಿಪ್ಪರ್ ಚಲಾಯಿಸಿ ಡಿಕ್ಕಿ ಹೊಡೆದ ಆರೋಪ ಮಾಡಲಾಗಿದೆ. ಇದೇ ವೇಳೆ, ಟಿಪ್ಪರ್ ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದನೇ? ಅಥವಾ ಎರಡು ಬಾರಿ ಹೇಗೆ ಡಿಕ್ಕಿ ಹೊಡೆಯಲು ಸಾಧ್ಯ? ಈ ಕುರಿತು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.



