ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇ5ರಷ್ಟು ಹೆಚ್ಚಿಸುವ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಫೆಬ್ರವರಿ 9ರಿಂದ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆ ಇದೆ.
ಮೂರು ದಿನಗಳ ಹಿಂದೆ ನಡೆದ ಬಿಎಂಆರ್ ಸಿಎಲ್ ಸಭೆಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ನಿರ್ಧರಿಸಲಾಗಿತ್ತು. ಸಭೆಯಲ್ಲಿ ಶೇ.5ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆಗೆ ನಿರ್ಧರಿಸಲಾಗಿದ್ದು, ದರ ಏರಿಕೆ ಪ್ರಸ್ತಾಪವನ್ನು ರಾಜ್ಯ ಸರ್ಕಾರದ ಮುಂದೆ ಇಡಲಾಗಿತ್ತು.
ರಾಜ್ಯ ಸರ್ಕಾರ ಶೇ.5ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆಗೆ ಅನುಮತಿ ನೀಡಿದ್ದು, ಪರಿಷ್ಕೃತ ಟಿಕೆಟ್ ದರ ಫೆಬ್ರವರಿ 9ರಿಂದ ಜಾರಿಯಾಗುವ ಸಾಧ್ಯತೆ ಇದ್ದು, ಎರಡು ದಿನದಲ್ಲಿ ಪರಿಷ್ಕೃತ ದರಗಳ ವಿವರ ಘೋಷಣೆಯಾಗುವ ಸಾಧ್ಯತೆ ಇದೆ.
ಕಳೆದ ವರ್ಷದ ಕೊನೆಯಲ್ಲಿ ಮೆಟ್ರೋ ಟಿಕೆಟ್ ದರಗಳಲ್ಲಿ ಶೇ.71% ಹೆಚ್ಚಳ ಮಾಡಲಾಗಿತ್ತು. ಇದಾದ ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ಪರಿಷ್ಕರಣೆಯು ಪ್ರಯಾಣದ ದೂರ ಕನಿಷ್ಠ 1 ರೂಪಾಯಿ ಮತ್ತು ಗರಿಷ್ಠ 5 ರೂ.ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಕಳೆದ ವರ್ಷ ಮೆಟ್ರೋ ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದ್ದರಿಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ಕುತೂಹಲ ಮೂಡಿದೆ.
ಬಿಎಂಆರ್ ಸಿಎಲ್ ಸಭೆಯಲ್ಲಿ ಒಪ್ಪಿಗೆ
ಕಳೆದ ಫೆಬ್ರವರಿ 9ರಂದು ಬಿಎಂಆರ್ಸಿಎಲ್ ಅಧಿಕಾರಿಗಳು ದುಪ್ಪಟ್ಟು ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಪ್ರಯಾಣಿಕರುಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರು ಮೆಟ್ರೊ ದರ ನಿಗದಿ ಸಮಿತಿ ಪುನರ್ ರಚಿಸಬೇಕು ಹಾಗೂ ಅಧಿಕಾರಿಗಳು ತಪ್ಪು ಲೆಕ್ಕ ಸರಿಪಡಿಸುವವರೆಗೆ ವಾರ್ಷಿಕ ದರ ಏರಿಕೆಯನ್ನು ತಡೆಹಿಡಿಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದರು.
ಮೊದಲು ತಪ್ಪು ಲೆಕ್ಕ ಕೊಟ್ಟು ಏರಿಕೆ ಮಾಡಿರುವ ದರವನ್ನು ಇಳಿಸಲಿ, ನಂತರ ಪ್ರತಿವರ್ಷ ಬೇಕಾದರೆ 5% ರಷ್ಟು ಏರಿಕೆ ಮಾಡಲಿ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದರು. ಆದರೆ ಇಷ್ಟೆಲ್ಲ ವಿರೋಧದ ನಡುವೆಯೂ ಮೆಟ್ರೋ ದರ ಏರಿಕೆ ಆಗಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.



