ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ 10 ತಿಂಗಳ ಮಗುವಿನ ಅಂಗಾಂಗಗಳನ್ನು ದಾನ ಮಾಡಿದ ಕುಟುಂಬದ 5 ಮಕ್ಕಳ ಬಾಳಿಗೆ ಬೆಳಕಾಗುವ ಮೂಲಕ ಮಾನವೀಯತೆ ಮೆರೆದ ಘಟನೆ ಕೇರಳದ ಎರ್ನಾಕಲುಂನಲ್ಲಿ ನಡೆದಿದೆ.
ತಮ್ಮ ಮಗಳು ಆಲಿನ್ ಶೆರಿನ್ ಅಬ್ರಹಾಂಳನ್ನು ಕಳೆದುಕೊಂಡ ತೀವ್ರ ದುಃಖದ ನಡುವೆಯೂ ಪೋಷಕರು ಆಕೆಯ ಪ್ರಮುಖ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾದರಿಯೆನಿಸಿದ್ದಾರೆ.
ಪಟ್ಟನಂತಿಟ್ಟು ಜಿಲ್ಲೆಯ ಮಲ್ಲಪ್ಪಳ್ಳಿಯ ಅರುಣ್ ಅಬ್ರಹಾಂ, ಪತ್ನಿ ಶೆರಿನ್, 10 ತಿಂಗಳ ಮಗಳು, ಹಾಗು ತಂದೆ ತಾಯಿ ಜೊತೆ ಫೆ. 5ರಂದು ಕೊಟ್ಟಾಯಂನಿಂದ ತಿರುವಲ್ಲಾಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಂದು ಮಧ್ಯಾಹ್ನ 2.30ರ ಸುಮಾರಿಗೆ ಅರುಣ್ ಚಲಾಯಿಸುತ್ತಿದ್ದ ಕಾರು ಕೊಟ್ಟಾಯಂನ ಪಲ್ಲಂ ಬಳಿ ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಮಗು ಆಲಿನ್ ಗಂಭೀರವಾಗಿ ಗಾಯಗೊಂಡಿತ್ತು.
ತಕ್ಷಣವೇ ಮಗುವನ್ನು ಚಂಗನಶ್ಶೇರಿಯ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನಂತರ ಹೆಚ್ಚಿನ ಚಿಕಿತ್ಸೆಗೆ ಚೆತಿಪುಳದಲ್ಲಿರುವ ಸೇಂಟ್ ಥಾಮಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನಂತರ ಬಿಲೀವರ್ಸ್ ಚರ್ಚ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವಿನ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಕಾರಣ, ಫೆ. 6ರಂದು ರಾತ್ರಿ ಕೊಚ್ಚಿನ್ನ ಅಮೃತ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಒಂದು ವಾರದಿಂದ ತಜ್ಞ ವೈದ್ಯಕೀಯ ತಂಡ ನಿರಂತರವಾಗಿ ಮಗುವಿನ ಚೇತರಿಕೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಮಗುವಿಗೆ ಪ್ರಜ್ಞೆ ಬಾರದ ಕಾರಣ, ನಂತರ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲಾಯಿತು.
ಅತೀವ ದುಃಖದ ನಡುವೆಯೇ ಮಗುವಿನ ತಂದೆ ಅರುಣ್ ಹಾಗೂ ತಾಯಿ ಶೆರಿನ್ ಅವರು ಆಕೆಯ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಹಾಗಾಗಿ ಆಲಿನ್ ಪೋಷಕರ ಸಮ್ಮತಿಯ ಮೇರೆಗೆ ಮಗುವಿನ ಅಂಗಾಂಗಗಳನ್ನು ಕೇರಳದ ವಿವಿಧ ಆಸ್ಪತ್ರೆಗಳಿಗೆ ನೀಡಲಾಗಿದೆ.
ಮಗಳನ್ನು ಕಳೆದುಕೊಂಡ ದುಃಖವಿದ್ದರೂ, ಸಾವು -ಬದುಕಿನ ಮಧ್ಯೆ ಹೋರಾಡುತ್ತಿರುವ ಅಪರಿಚಿತರ ಜೀವಗಳನ್ನು ಉಳಿಸುವ ಅವರ ಇಚ್ಛಾಶಕ್ತಿ ಸಮಾಜಕ್ಕೆ ಪ್ರಬಲ ಸಂದೇಶ ರವಾನಿಸಿದೆ. ಪೋಷಕರಿಗೆ ಈ ನಷ್ಟ ಭರಿಸಲಾಗದಿದ್ದರೂ, ಆಲಿನ್ ಶೆರಿನ್ ಅಬ್ರಹಾಂ ಹೆಸರು ಕೇರಳದ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶ್ಲಾಘಿಸಿದ್ದಾರೆ.
ಈಗಾಗಲೇ ಅಂಗಾಂಗಗಳನ್ನು ಸಾಗಿಸಲು ಹೆಚ್ಚಿನ ಲಾಜಿಸ್ಟಿಕ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಗ್ರೀನ್ ಚಾನಲ್ ಮೂಲಕ ಪೊಲೀಸರ ಬೆಂಗಾವಲಿನೊಂದಿಗೆ ಮೀಸಲಾದ ಆಂಬ್ಯುಲೆನ್ಸ್ ಸಂಜೆ 6.30ಕ್ಕೆ ಅಮೃತ ಆಸ್ಪತ್ರೆಯಿಂದ ತಿರುವನಂತಪುರಂಗೆ ಹೊರಡಲಿದೆ. ತ್ವರಿತ ಸಾಗಣೆಗೆ ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಗಳಲ್ಲಿ ಸಂಚಾರ ನಿಯಮಗಳು ಜಾರಿಯಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳಲು ಕೆ-ಸೊಟ್ಟೊ ಅಧಿಕಾರಿಗಳು ಜಿಲ್ಲಾ ಪೊಲೀಸ್ ಮುಖ್ಯಸ್ಥರೊಂದಿಗೆ ಸಮನ್ವಯ ಸಾಧಿಸಿದ್ದಾರೆ.
ತಿರುವನಂತಪುರದ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಆಲಿನ್ಳ ಯಕೃತ್ತನ್ನು ಆರು ತಿಂಗಳ ಮಗುವಿಗೆ ಕಸಿ ಮಾಡಲಾಗುವುದು. ಈ ಮೂಲಕ ಮೃತ ದಾನಿಯಿಂದ ಯಕೃತ್ತನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಆ ಮಗು ಪಾತ್ರವಾಗಲಿದೆ.
ಆಕೆಯ ಮೂತ್ರಪಿಂಡಗಳನ್ನು SAT ಆಸ್ಪತ್ರೆಯ ಪೀಡಿಯಾಟ್ರಿಕ್ ನೆಫ್ರಾಲಜಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ ಕಸಿ ಮಾಡಲಾಗುತ್ತದೆ. ಆಕೆಯ ಹೃದಯ ಶ್ರೀ ಚಿತ್ರ ತಿರುನಾಳ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿ (SCTIMST) ನಲ್ಲಿರುವ ಯುವ ರೋಗಿಯನ್ನು ಉಳಿಸಲಿದೆ. ಕಾರ್ನಿಯಾಗಳನ್ನು ಅಮೃತ ಆಸ್ಪತ್ರೆಯ ರೋಗಿಗಳಿಗೆ ದಾನ ಮಾಡಲಾಗಿದೆ.



