Saturday, June 27, 2026
Google search engine
Homeರಾಜಕೀಯಹೈಕಮಾಂಡ್ ಒಪ್ಪಿದರೆ ಇನ್ನೆರಡು ಬಜೆಟ್ ಮಂಡಿಸುವೆ: ಸಿಎಂ ಸಿದ್ದರಾಮಯ್ಯ

ಹೈಕಮಾಂಡ್ ಒಪ್ಪಿದರೆ ಇನ್ನೆರಡು ಬಜೆಟ್ ಮಂಡಿಸುವೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಹೈಕಮಾಂಡ್ ಅವಕಾಶ ನೀಡಿದರೆ ಮುಂದಿನ 2 ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಮತ್ತೊಮ್ಮೆ ಅಧಿಕಾರ ಹಂಚಿಕೆ ವಿಷಯ ಕೆದಕಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ದಾಖಲೆ ಮುರಿಯುವುದು ಸಾಧನೆಯಲ್ಲ. ಆದರೆ ಜನರು ಆಶೀರ್ವದಿಸಿ, ಅವಕಾಶ ನೀಡಿದರೆ, ಖಂಡಿತ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರು.

ಶುಕ್ರವಾರ ದಾಖಲೆಯ 17ನೇ ಬಾರಿ ಬಜೆಟ್ ಮಂಡಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಹೇಳಿಕೆ ಮತ್ತೊಮ್ಮೆ ಅಧಿಕಾರ ಹಂಚಿಕೆಯ ಚರ್ಚೆಗೆ ಮತ್ತೆ ಚಾಲನೆ ದೊರೆತಂತೆ ಆಗಿದೆ.

ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಮೊದಲಿನಿಂದಲೂ ಇದೆ. ಈಗಲೂ ಇದೆ. ಹೈಕಮಾಂಡ್ ನಂಬದೇ ನಿಮ್ಮನ್ನು (ಮಾಧ್ಯಮ) ನಂಬಲು ಸಾಧ್ಯವೇ ಎಂದು ಅವರು ಪ್ರಶ್ನೆಸಿದರು.

ಸಮಾಜದ ಸರ್ವರಿಗೂ ಬಜೆಟ್

ಇಡೀ ರಾಜ್ಯದ ಬೆಳವಣಿಗೆಯನ್ನು ಬಜೆಟ್ ನಲ್ಲಿ ನಿರೀಕ್ಷಿಸಬಹುದಾಗಿದ್ದು, ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ನೀಡುವುದೇ ಈ ಬಾರಿಯ ಬಜೆಟ್ ನ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮೋದಿ ಅವಧಿಯಲ್ಲಿ 218 ಲಕ್ಷ ಕೋಟಿ ಸಾಲ

ಸಾಲ ಮಾಡದೇ ಅಭಿವೃದ್ಧಿ ಸಾಧ್ಯವಿಲ್ಲ. ಆರ್ಥಿಕ ಹೊಣೆಗಾರಿಕೆ ಕಾಯ್ದೆ ತಿಳಿಸಿರುವ ಮಾನದಂಡಗಳ ಮಿತಿಯಲ್ಲಿ ಸಾಲದ ಪ್ರಮಾಣ ಇದೆ. ಈ ಕಾಯ್ದೆಯಂತೆ ಸಾಲವು ಶೇ. 25 ರಷ್ಟಿರಬೇಕಿದ್ದು, ನಮ್ಮ ಸಾಲದ ಪ್ರಮಾಣ 24.94 ಇದ್ದು, ಮಿತಿಯೊಳಗೇ ಇದೆ ಎಂದು ಅವರು ಸಮರ್ಥಿಸಿಕೊಂಡರು.

ಕೇಂದ್ರದ ಸಾಲದ ಪ್ರಮಾಣ 218 ಲಕ್ಷ ಕೋಟಿ ಇದೆ. ಮೋದಿ ಅಧಿಕಾರಕ್ಕೆ ಬಂದ ನಂತರ 165 ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ. ಇದು ಕಾಯ್ದೆಯ ಪ್ರಕಾರ 55.6 % ರಷ್ಟು ಇದೆ. ಭಾರತದ ವಿತ್ತೀಯ ಕೊರತೆ 4.4 ರಷ್ಟಿದ್ದು, ಕರ್ನಾಟಕ ರಾಜ್ಯದ ವಿತ್ತೀಯ ಕೊರತೆ 2.95 ಆಗಿದೆ ಎಂದು ಅವರು ವಿವರಿಸಿದರು.

ಕಾಯ್ದೆಯು ಸೂಚಿಸಿರುವ ಜಿಡಿಪಿಯ ಶೇ. 3ರ ಮಿತಿಯೊಳಗೆ ಇದೆ. ಕರ್ನಾಟಕದ ಜಿಡಿಪಿ 33,05,500 ಕೋಟಿ ಇದೆ. ಬಿಜೆಪಿಯವರು ಸರ್ಕಾರ ಹೆಚ್ಚು ಸಾಲ ಮಾಡಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಸೂಚಿಸಿರುವ ಮಾನದಂಡದ ಮಿತಿಯೊಳಗೆ ಸಾಲ ಮಾಡಲಾಗಿದೆ ಎಂದು ಅವರು ಪುನರುಚ್ಚರಿಸಿದರು.

ಈ ಬಾರಿಯ ಬಜೆಟ್ ಸಾಮಾಜಿಕ ನ್ಯಾಯವನ್ನು ಕೇಂದ್ರೀಕರಿಸಿ ಮಾಡಲಾಗಿದ್ದು ಇಡೀ ರಾಜ್ಯದ ಬೆಳವಣಿಗೆಯನ್ನು ಬಜೆಟ್ ನಲ್ಲಿ ನಿರೀಕ್ಷಿಸಲಾಗುತ್ತದೆ, ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ನೀಡುವ ಉದ್ದೇಶವನ್ನು ಹೊಂದಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments