ನೋಯ್ಡಾ(ಉತ್ತರ ಪ್ರದೇಶ): ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕೆ ಕಾರ್ಮಿಕರು ಆಗ್ರಹಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರಿದ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಹೇಳಲಾಗಿದೆ.
ಸೋಮವಾರ ಕಾರ್ಮಿಕರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರ ಯೋಜಿತ ಪಿತೂರಿಯಾಗಿದ್ದು, ಪಾಕಿಸ್ತಾನದ ನಂಟಿನ ಕುರಿತು ತನಿಖೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಕಾರ್ಮಿಕ ಸಚಿವ ಅನಿಲ್ ರಾಜ್ಭರ್ ತಿಳಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶದಿಂದ ಈ ಘಟನೆ ನಡೆದಿರುವಂತೆ ತೋರುತ್ತಿದೆ. ಇತ್ತೀಚಿನ ದಿನಗಳಲ್ಲಿ, ಮೀರತ್ ಮತ್ತು ನೋಯ್ಡಾದಿಂದ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಬಂಧಿತರು ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸುವ ಪಿತೂರಿಯ ಸಾಧ್ಯತೆ ಬಲಗೊಳ್ಳುತ್ತಿದೆ. ತನಿಖಾ ಸಂಸ್ಥೆಗಳು ಗಂಭೀರವಾಗಿ ತನಿಖೆ ನಡೆಸುತ್ತಿವೆ ಎಂದರು.
ಮುಜಫರ್ ನಗರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಗುರಿ ಹೊಂದಿದ್ದು, ಈ ಮೂಲಕ ಅಶಾಂತಿ ಸೃಷ್ಟಿಸಲಾಗಿದೆ. ದೇಶವಿರೋಧಿ ಶಕ್ತಿಗಳು ರಾಜ್ಯದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಹಿಂಸಾಚಾರ ಪ್ರಕರಣ ಸಂಬಂಧ 7 ಎಫ್ ಐಆರ್ ದಾಖಲಾಗಿದ್ದು, 300ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆದಿದೆ.
ಇದೇ ವೇಳೆ ಉತ್ತರ ಪ್ರದೇಶ ಸರ್ಕಾರ, ಎಲ್ಲಾ ವರ್ಗದ ಕಾರ್ಮಿಕರ ಕನಿಷ್ಠ ವೇತನ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಗೌತಮ್ ಬುದ್ಧ ನಗರ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರು ಮಾತನಾಡಿ, ಉನ್ನತಾಧಿಕಾರ ಸಮಿತಿ ವೇತನ ಹೆಚ್ಚಳ ಮಾಡಿದೆ. ಕೌಶಲ್ಯರಹಿತ ಕಾರ್ಮಿಕರು ಮಾಸಿಕ 13,690 ರೂ, ಅರೆ ಕೌಶಲ್ಯ ಕಾರ್ಮಿಕರು ಮಾಸಿಕ 15,059 ರೂ ಮತ್ತು ಕೌಶಲ್ಯಯುತ ಕಾರ್ಮಿಕರು ಮಾಸಿಕ 16,868 ರೂ ವೇತನ ಪಡೆಯಲಿದ್ದಾರೆ ಎಂದು ತಿಳಿಸಿದರು.
ಇತರ ಪುರಸಭೆ ಪ್ರದೇಶಗಳಿಗೆ ಪರಿಷ್ಕೃತ ಮಾಸಿಕ ವೇತನವನ್ನು ಕೌಶಲ್ಯರಹಿತ ಕಾರ್ಮಿಕರಿಗೆ 13,006 ರೂ, ಅರೆ ಕೌಶಲ್ಯಪೂರ್ಣ ಕಾರ್ಮಿಕರಿಗೆ 14,306 ರೂ ಮತ್ತು ಕೌಶಲ್ಯಪೂರ್ಣ ಕಾರ್ಮಿಕರಿಗೆ 16,025 ರೂ ನಿಗದಿಪಡಿಸಲಾಗಿದೆ.
ಉಳಿದ ಜಿಲ್ಲೆಗಳಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ತಿಂಗಳಿಗೆ 12,356 ರೂ, ಅರೆ ಕೌಶಲ್ಯಪೂರ್ಣ ಕಾರ್ಮಿಕರಿಗೆ 13,591 ರೂ, ಮತ್ತು ಕೌಶಲ್ಯಪೂರ್ಣ ಕಾರ್ಮಿಕರಿಗೆ 15,224 ರೂ ವೇತನ ಸಿಗಲಿದೆ. ಉದ್ಯೋಗದಾತರ ಸಂಸ್ಥೆಗಳು ಮತ್ತು ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.



