ವಾಷಿಂಗ್ಟನ್(ಯುಎಸ್‌ಎ): ಇರಾನ್ ಯುದ್ದ ಅಂತ್ಯದಲ್ಲಿದೆ. ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಬಗೆಹರಿಯಬಹುದು ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಅಂತ್ಯಗೊಳ್ಳುವ ಸೂಚನೆ ನೀಡಿದ್ದಾರೆ.
ಇರಾನ್ ಬಂದರುಗಳಿಗೆ ದಿಗ್ಬಂಧನ ವಿಧಿಸುವಲ್ಲಿ ಅಮೆರಿಕ ಯಶಸ್ವಿಯಾಗಿದೆ ಎಂದು ಕೇಂದ್ರ ಕಮಾಂಡ್ ಹೇಳಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ಅಮೆರಿಕ ಬೆಂಬಲಿಸುತ್ತಿದೆ ಎಂದೂ ತಿಳಿಸಿದ್ದಾರೆ.
ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾವು ಯುದ್ಧದ ಅಂತಿಮ ಹಂತದಲ್ಲಿದ್ದೇವೆ ಎಂದು ನನಗನ್ನಿಸುತ್ತಿದೆ. ಅವರಿಗೂ(ಇರಾನ್) ಒಪ್ಪಂದ ಬೇಕಾಗಿದೆ. ಎಲ್ಲವೂ ಸರಿಯಾದರೂ ಇರಾನ್ ಮತ್ತೆ ಯಥಾಸ್ಥಿತಿಗೆ ಬರಲು 20 ವರ್ಷಗಳೇ ಬೇಕಾಗಬಹುದು ಎಂದು ಹೇಳಿದ್ದಾರೆ.
ನಾವು ಯುದ್ದ ಮಾಡದೇ ಇರುತ್ತಿದ್ದರೆ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿರುತ್ತಿತ್ತು. ಅವರ ಬಳಿ ಪರಮಾಣು ಶಸ್ತ್ರಾಸ್ತ್ರವಿದ್ದಲ್ಲಿ ಅಲ್ಲಿರುವವರನ್ನೆಲ್ಲ ನೀವು ‘ಸರ್’ ಎಂದು ಕರೆಯಬೇಕಾಗುತ್ತದೆ. ಪರಮಾಣು ಶಸ್ತ್ರಾಸ್ತ್ರವಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿತ್ತು. ನಾವು ಅದನ್ನು ಬಯಸುವುದಿಲ್ಲ ಎಂದು ಹೇಳಿದರು.
ಫೆಬ್ರವರಿ 28ರಂದು ಆರಂಭವಾದ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಮಾತುಕತೆಯಲ್ಲಿ ಒಪ್ಪಂದಕ್ಕೆ ಬರಲು ಅಮೆರಿಕ ಮತ್ತು ಇರಾನ್ ವಿಫಲವಾಗಿದೆ.
ಲೆಬನಾನ್- ಇಸ್ರೇಲ್ ಮಾತುಕತೆ
ಮಂಗಳವಾರ ವಾಷಿಂಗ್ಟನ್‌ನಲ್ಲಿ ಲೆಬನಾನ್ ಮತ್ತು ಇಸ್ರೇಲ್ ನಡುವೆ ದಶಕಗಳಲ್ಲೇ ಮೊದಲ ಬಾರಿಗೆ ನೇರ ರಾಜತಾಂತ್ರಿಕ ಮಾತುಕತೆಗಳು ನಡೆದವು.
ಎರಡೂ ದೇಶಗಳ ನಡುವಿನ ಮಾತುಕತೆ ‘ಐತಿಹಾಸಿಕ ಅವಕಾಶ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಬಣ್ಣಿಸಿದ್ದಾರೆ. ಆದರೆ ತಕ್ಷಣವೇ ಯಾವುದೇ ಮಹತ್ವದ ಒಪ್ಪಂದ ಏರ್ಪಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎರಡು ಗಂಟೆಗಳ ಕಾಲ ನಡೆದ ಸಭೆ ಬಳಿಕ ಅಮೆರಿಕ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಇಸ್ರೇಲ್ ಮತ್ತು ಲೆಬನಾನ್ ನಡುವೆ ನೇರ ಮಾತುಕತೆಗಳನ್ನು ಆರಂಭಿಸುವ ಹಂತಗಳ ಕುರಿತು ಉತ್ತಮ ಚರ್ಚೆಗಳು ನಡೆದಿವೆ ಎಂದು ಹೇಳಿದೆ. ನೇರ ಮಾತುಕತೆಗಳನ್ನು ವಿರೋಧಿಸಿರುವ ಹಿಜ್ಬುಲ್ಲಾ ಈ ಸಭೆಯನ್ನು ಪ್ರತಿನಿಧಿಸಿಲ್ಲ. ಅಲ್ಲದೆ, ಚರ್ಚೆಗಳು ಪ್ರಾರಂಭವಾದ ಬಳಿಕ ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ತನ್ನ ದಾಳಿಯನ್ನು ಹೆಚ್ಚಿಸಿರುವುದು ಕಂಡುಬಂದಿದೆ.
ಯುದ್ಧ ನಿಲ್ಲಿಸುವ ಒಪ್ಪಂದವು ಎರಡು ಸರ್ಕಾರಗಳ ನಡುವೆ ನಡೆಯಬೇಕು. ಅದಕ್ಕೆ ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆ ವಹಿಸಬೇಕು ಹಾಗೂ ಯಾವುದೇ ಪ್ರತ್ಯೇಕ ಮಾರ್ಗದ ಮೂಲಕ ಅಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ದೃಢಪಡಿಸಿದೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಹೇಳಿದೆ.



