ಟೆಹರಾನ್: ಹರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ ಎರಡು ತೈಲ ಟ್ಯಾಂಕರ್ ಮೇಲೆ ಇರಾನ್‌ನಿಂದ ಗುಂಡಿನ ದಾಳಿ ನಡೆಸಿದೆ. ಈ ಮೂಲಕ ಇರಾನ್ ಹರ್ಮುಜ್ ಮೇಲೆ ಮತ್ತೆ ನಿಯಂತ್ರಣ ಸಾಧಿಸಲು ಮುಂದಾಗಿದೆ.
ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದ್ದು, ದಾಳಿ ಬಳಿಕ ತೈಲ ಟ್ಯಾಂಕರ್‌ಗಳು ಹರ್ಮುಜ್ ಜಲಸಂಧಿ ದಾಟುವ ಪ್ರಯತ್ನ ಮಾಡದೇ ಮರಳಿವೆ ಎಂದು ಹೇಳಲಾಗಿದೆ.
ಜಲಸಂಧಿಯಲ್ಲಿ ಹಡಗುಗಳು ಬರುತ್ತಿದ್ದಂತೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಎರಡು ಗನ್‌ಬೋಟ್‌ಗಳು ಸಮೀಪಿಸಿದ್ದು, ಯಾವುದೇ ರೇಡಿಯೋ ಸಂದೇಶ ನೀಡದೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಟ್ಯಾಂಕರ್‌ನ ಕ್ಯಾಪ್ಟನ್ ವರದಿ ಮಾಡಿದ್ದಾರೆ.
ಒಮನ್‌ನ ಈಶಾನ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ. ಟ್ಯಾಂಕರ್ ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಯುಕೆ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ ಮಾಹಿತಿ ಹಂಚಿಕೊಂಡಿದೆ.
ಈ ಬೆಳವಣಿಗೆ ನಡುವೆ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿರುವ ವ್ಯಾಪಾರಿ ಹಡಗುಗಳು ಇರಾನಿನ ನೌಕಾಪಡೆಯಿಂದ ರೇಡಿಯೋ ಸಂದೇಶಗಳನ್ನು ಸ್ವೀಕರಿಸಿವೆ. ಈ ಸಂದೇಶದಲ್ಲಿ ಅಮೆರಿಕ ಸರ್ಕಾರವು ತನ್ನ ಬದ್ಧತೆಯನ್ನು ತೋರಿಸುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ಮುಚ್ಚಿದ್ದೇವೆ ಎಂದು ನಾವು ಘೋಷಿಸುತ್ತೇವೆ. ಯಾವುದೇ ರಾಷ್ಟ್ರದ ಹಡಗು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ.
ಹರ್ಮುಜ್ ಗೆ ಮತ್ತೆ ನಿರ್ಬಂಧ
ವಿದೇಶಗಳಲ್ಲಿರುವ ಇರಾನ್ ಖಾತೆಗಳ ದಿಗ್ಬಂಧನ ಮತ್ತು ಆರ್ಥಿಕ ದಿಗ್ಧಂಧನ ತೆರವಿಗೆ ಅಮೆರಿಕ ನಿರಾಕರಿಸಿದ ಬೆನ್ನಲ್ಲೇ ಹರ್ಮುಜ್ ಜಲಸಂಧಿ ಮುಕ್ತಗೊಳಿಸುವುದಾಗಿ ಘೋಷಿಸಿದ್ದ ಇರಾನ್ ಈ ನಿರ್ಧಾರದಿಂದ ಹಿಂದೆ ಸರಿದಿದೆ.
ಹರ್ಮುಜ್ ಜಲಸಂಧಿ ಸಶಸ್ತ್ರ ಪಡೆಗಳ ಕಟ್ಟುನಿಟ್ಟಾದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿದೆ. ಅಮೆರಿಕ ಪದೇಪದೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಒಂದೇ ದಿನದಲ್ಲಿ 7 ಬಾರಿ ಸುಳ್ಳು ಹೇಳಿದೆ ಎಂದು ಇರಾನ್ ಆಕ್ಷೇಪಿಸಿದೆ.
ಹರ್ಮುಜ್ ಮುಕ್ತಗೊಳಿಸುವ ತೀರ್ಮಾನವನ್ನು ನಾವು ವಾಪಸ್ ಪಡೆಯುತ್ತೇವೆ. ಅಮೆರಿಕ ಯುದ್ಧ ಮಾಡುವುದಾದರೆ ಮಾಡಲಿ. ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದೆ.



