Monday, May 25, 2026
Google search engine
Homeಆರೋಗ್ಯನೀವು ಬೇಸಿಗೆಯಲ್ಲಿ ಐವಿಎಫ್ ಪ್ಲಾನ್ ಮಾಡುತ್ತಿದ್ದೀರಾ? ಇಲ್ಲಿವೆ ಫಲವತ್ತತೆ ತಜ್ಞರ ಸಲಹೆಗಳು

ನೀವು ಬೇಸಿಗೆಯಲ್ಲಿ ಐವಿಎಫ್ ಪ್ಲಾನ್ ಮಾಡುತ್ತಿದ್ದೀರಾ? ಇಲ್ಲಿವೆ ಫಲವತ್ತತೆ ತಜ್ಞರ ಸಲಹೆಗಳು

ತಂದೆ-ತಾಯಿ ಆಗಬೇಕು ಅನ್ನುವುದು ಅದೆಷ್ಟೋ ದಂಪತಿಯ ಕನಸು. ಐವಿಎಫ್ ಅನ್ನುವುದು ಆ ಕನಸನ್ನು ನನಸು ಮಾಡುವ ಒಂದು ಉತ್ತಮ ಆಯ್ಕೆ. ಹಾಗಂತ ಬೇಸಿಗೆ ಸಮಯದಲ್ಲಿ ಈ ಪ್ರಯತ್ನಕ್ಕೆ ಮುಂದಾದರೆ ತೀವ್ರವಾದ ಶಾಖ ಮತ್ತು ತಾಪಮಾನದಿಂದ ಗರ್ಭಧಾರಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಬಹಳಷ್ಟು ಮಂದಿಯಲ್ಲಿ ಇರುತ್ತದೆ. ಅದಕ್ಕೆ ಕಾರಣ ಬೇಸಿಗೆಯಲ್ಲಿ ಗರ್ಭಧರಿಸುವುದು ಕಷ್ಟ ಎಂಬ ತಪ್ಪು ಕಲ್ಪನೆ.

ಈ ತಪ್ಪು ಕಲ್ಪನೆ ಬಹಳ ಕಾಲದಿಂದಲೂ ಇದೆ. ಆದರೆ ವಾಸ್ತವದಲ್ಲಿ ಇದು ನಿಜವಲ್ಲ. ಐವಿಎಫ್ ಪ್ರಯೋಗಾಲಯಗಳು ತಾಪಮಾನ ನಿಯಂತ್ರಿತ ವ್ಯವಸ್ಥೆಯನ್ನು ಹೊಂದಿರುವುದರಿಂದ, ನೀವು ಯಾವ ಋತುವಿನಲ್ಲಿ ಚಿಕಿತ್ಸೆ ಪಡೆದರೂ ಅದು ಯಶಸ್ವಿಯಾಗಬಲ್ಲದು.

ವಾಸ್ತವವಾಗಿ, ಬೇಸಿಗೆಯ ಹವಾಮಾನವು ಚಿಕಿತ್ಸೆಯ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುವ ಕೆಲವು ಪೂರಕ ಅಂಶಗಳನ್ನು ಹೊಂದಿದೆ (ಸಹಜವಾಗಿ ಕೆಲವು ಮುನ್ನೆಚ್ಚರಿಕೆಗಳೊಂದಿಗೆ). ನೀವು ಬೇಸಿಗೆಯಲ್ಲಿ ನಿಮ್ಮ ಐವಿಎಫ್ ಯೋಜನೆಯನ್ನು ಮಾಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಫಲವತ್ತತೆ ತಜ್ಞರು ಅಥವಾ ಫರ್ಟಿಲಿಟಿ ಸ್ಪೆಷಲಿಸ್ಟ್ ಗಳು ನೀಡಿರುವ ಪ್ರಾಮಾಣಿಕ ಅಭಿಪ್ರಾಯಗಳನ್ನು ಇಲ್ಲಿ ತಿಳಿಯೋಣ.

ಹೆಚ್ಚಿನ ವಿಟಮಿನ್ ಡಿ ಮಟ್ಟ

ಬೇಸಿಗೆಯ ಅವಧಿಯಲ್ಲಿ ನಾವು ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುತ್ತೇವೆ ಮತ್ತು ಇದರೊಂದಿಗೆ ನಮ್ಮ ದೇಹದಲ್ಲಿ ವಿಟಮಿನ್ ಡಿ ಅಂಶವು ಹೆಚ್ಚಾಗುತ್ತದೆ. ಈ ವಿಟಮಿನ್ ಕೇವಲ ಒಂದು ಪೌಷ್ಟಿಕಾಂಶದ ಅಂಶವಾಗಿರದೆ, ‘ಪ್ರೊಹಾರ್ಮೋನ್’ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದು ದೇಹದ ಹಲವಾರು ಜೈವಿಕ ಕ್ರಿಯೆಗಳಿಗೆ ಅತ್ಯಗತ್ಯವಾಗಿದೆ. ವಿಟಮಿನ್ ಡಿ ಕೊರತೆಯು ಪಿಸಿಓಎಸ್, ಎಂಡೊಮೆಟ್ರಿಯೋಸಿಸ್ ಮತ್ತು ಬಂಜೆತನದಂತಹ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿರುವುದು ಇಲ್ಲಿ ಗಮನಾರ್ಹ.

ಇದು ಪುರುಷರು ಮತ್ತು ಮಹಿಳೆಯರಿಬ್ಬರಲ್ಲೂ ಸಂತಾನೋತ್ಪತ್ತಿ ಹಾರ್ಮೋನ್‌ ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ನಿಯಮಿತ ಅಂಡೋತ್ಪತ್ತಿ, ವೀರ್ಯದ ಆರೋಗ್ಯದಲ್ಲಿ ಸುಧಾರಣೆ ಮತ್ತು ಅಂಡಾಣುಗಳ ಬೆಳವಣಿಗೆಗೆ ಪೂರಕವಾಗುತ್ತದೆ. ಇತರ ಋತುಗಳಿಗೆ ಹೋಲಿಸಿದರೆ, ಬೇಸಿಗೆಯಲ್ಲಿ ರಕ್ತದಲ್ಲಿನ ವಿಟಮಿನ್ ಡಿ ಮಟ್ಟವು ಹೆಚ್ಚಾಗಿರುವುದರಿಂದ, ಇದು ಗರ್ಭಧಾರಣೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಜೀವನಶೈಲಿಯ ಅಂಶಗಳು

ಬೇಸಿಗೆಯ ದಿನಗಳು ಕೇವಲ ಪ್ರಕೃತಿಯಲ್ಲಿ ಮಾತ್ರವಲ್ಲದೆ ಮನುಷ್ಯರಲ್ಲೂ ಹೊಸ ಚೈತನ್ಯವನ್ನು ತುಂಬುತ್ತವೆ. ಹೆಚ್ಚಿದ ದೈಹಿಕ ಚಟುವಟಿಕೆಗಳು, ಆಯಾ ಕಾಲಕ್ಕೆ ತಕ್ಕಂತೆ ಸಿಗುವ ತಾಜಾ ಹಣ್ಣು-ತರಕಾರಿಗಳು, ರಜೆಗಳು ಅಥವಾ ಕೆಲಸದ ಒತ್ತಡದ ಇಳಿಕೆ – ಇವೆಲ್ಲವೂ ಬೇಸಿಗೆಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹಾರ್ಮೋನ್‌ ಗಳ ಸಮತೋಲನವನ್ನು ಸುಧಾರಿಸುತ್ತದೆ. ಇವೆಲ್ಲವೂ ಆರೋಗ್ಯ ಉತ್ತಮಗೊಳಿಸುವ ಜೊತೆಗೆ ಸಂತಾನೋತ್ಪತ್ತಿ ವ್ಯವಸ್ಥೆಯ ಆರೋಗ್ಯಕ್ಕೂ ಪೂರಕವಾಗಿವೆ.

ದಿನದ ಅವಧಿ ಹೆಚ್ಚಿರುವುದು ಮತ್ತು ನೈಸರ್ಗಿಕ ಬೆಳಕು ಹೇರಳವಾಗಿ ಸಿಗುವುದು ನಮ್ಮ ದೇಹದ ಸಿರ್ಕಾಡಿಯನ್ ರಿದಮ್ (ನಿದ್ರೆ ಮತ್ತು ಎಚ್ಚರವಿರುವ ಚಕ್ರ) ಮತ್ತು ಮೆಲಟೋನಿನ್ ಮಟ್ಟವನ್ನು ಸ್ಥಿರವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಇದು ನಿಯಮಿತ ಅಂಡೋತ್ಪತ್ತಿ ಮತ್ತು ವೀರ್ಯದ ಉತ್ಪಾದನೆಯನ್ನು ಉತ್ತೇಜಿಸಬಹುದು.

ಗಮನಿಸಬೇಕಾದ ಅಪಾಯಕಾರಿ ಅಂಶಗಳು

ಬೇಸಿಗೆಯು ಹಲವು ಪ್ರಯೋಜನಗಳನ್ನು ಹೊಂದಿದ್ದರೂ, ತನ್ನದೇ ಆದ ಕೆಲವು ಸವಾಲುಗಳನ್ನು ಒಳಗೊಂಡಿದೆ. ವಿಪರೀತ ಬಿಸಿಲಿನ ವಾತಾವರಣವು ಬೆವರುವಿಕೆಯನ್ನು ಹೆಚ್ಚಿಸುತ್ತದೆ, ಇದರಿಂದ ದೇಹದಲ್ಲಿನ ದ್ರವಾಂಶ ಕಡಿಮೆಯಾಗಿ ರಕ್ತದ ಪ್ರಮಾಣ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗೆ ಬೇಕಾಗುವ ರಕ್ತ ಸಂಚಾರ ಕುಂಠಿತಗೊಳ್ಳಬಹುದು. ದೀರ್ಘಕಾಲದವರೆಗೆ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ದೇಹದ ಆಂತರಿಕ ತಾಪಮಾನ ಹೆಚ್ಚಾಗಬಹುದು, ಇದು ಒತ್ತಡ ಮತ್ತು ಆಯಾಸವನ್ನು ಆಚೀಚೆಗೊಳಿಸಬಹುದು.

ಕೆಲವು ಸರಳ ಕ್ರಮಗಳ ಮೂಲಕ ಈ ಅಪಾಯಗಳನ್ನು ತಡೆಗಟ್ಟಬಹುದು. ದೇಹದಲ್ಲಿ ನೀರಿನಂಶವಿರುವಂತೆ ನೋಡಿಕೊಳ್ಳುವುದು, ಬಿಸಿಲು ಹೆಚ್ಚಿರುವ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು, ಸಡಿಲವಾದ ಮತ್ತು ಗಾಳಿಯಾಡುವಂತಹ ಬಟ್ಟೆಗಳನ್ನು ಧರಿಸುವುದು ಹಾಗೂ ಸಾಧ್ಯವಾದಷ್ಟು ತಂಪಾದ ಕೋಣೆಗಳಲ್ಲಿ ವಿಶ್ರಾಂತಿ ಪಡೆಯುವುದು ಈ ಸಂದರ್ಭದಲ್ಲಿ ಉತ್ತಮ.

ಇದರೊಂದಿಗೆ, ನಿಮ್ಮ ಐವಿಎಫ್ ಕೇಂದ್ರವು ಸುಧಾರಿತ ಹಾಗೂ ಗುಣಮಟ್ಟದ ಪ್ರಯೋಗಾಲಯವನ್ನು ಹೊಂದಿರುವುದನ್ನು ಮತ್ತು ಕಟ್ಟುನಿಟ್ಟಾದ ಪ್ರೋಟೋಕಾಲ್‌ ಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಔಷಧಿಗಳನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸಿಡುವುದು ಮತ್ತು ಚಿಕಿತ್ಸೆಯ ಪ್ರಕ್ರಿಯೆಯು ಸುಗಮವಾಗಿ ಸಾಗಲು ದಿನದ ತಂಪಾದ ಸಮಯದಲ್ಲಿ (ಸಂಜೆ ಅಥವಾ ಮುಂಜಾನೆ) ಅಪಾಯಿಂಟ್‌ ಮೆಂಟ್ ನಿಗದಿಪಡಿಸಿಕೊಳ್ಳುವುದು ಕೂಡ ಗಮನಾರ್ಹ.

ಸ್ವಲ್ಪ ಮಾರ್ಗದರ್ಶನ ಪಡೆಯುವ ಮೂಲಕ ಮತ್ತು ಕಾಳಜಿ ತೋರುವ ಮೂಲಕ ನೀವು ಬೇಸಿಗೆಯಲ್ಲಿ ನಿಮ್ಮ ಐವಿಎಫ್ ಯೋಜನೆ ಕಾರ್ಯಗತಗೊಳಿಸಲು ಮುಂದಾಗಬಹುದಾಗಿದೆ.

– ಡಾ. ಪ್ರಿಂಕಾ ಬಜಾಜ್, ಎಂಬಿಬಿಎಸ್, ಡಿ.ಎನ್.ಬಿ, ಎಫ್.ಆರ್.ಎಂ, ಎಫ್.ಎಂ.ಎ.ಎಸ್. ಸೀನಿಯರ್ ಕನ್ಸಲ್ಟೆಂಟ್ ಫರ್ಟಿಲಿಟಿ ಸ್ಪೆಷಲಿಸ್ಟ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments