ಟೂರ್ನಿಯುದ್ದಕ್ಕೂ ರನ್ ಬರ ಎದುರಿಸುತ್ತಿದ್ದ ಕಿಂಗ್ ವಿರಾಟ್ ಕೊಹ್ಲಿ ಅಮೋಘ ಅರ್ಧಶತಕದ ನೆರವಿನಿಂದ ಭಾರತ ತಂಡ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 176 ರನ್ ಗುರಿ ಒಡ್ಡಿದೆ.
ಗಯಾನಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು. ವಿಶ್ವಕಪ್ ಫೈನಲ್ ನಲ್ಲಿ ಅತ್ಯಧಿಕ ಮೊತ್ತ ದಾಖಲಿಸಿದ ಗೌರವಕ್ಕೆ ಭಾರತ ಪಾತ್ರವಾಯಿತು. ಈ ಹಿಂದೆ ವಿಶ್ವಕಪ್ ನಲ್ಲಿ 173 ರನ್ ಬಂದಿದ್ದೇ ಗರಿಷ್ಠ ಮೊತ್ತವಾಗಿತ್ತು.
ಭಾರತ ತಂಡ 34 ರನ್ ಕಲೆ ಹಾಕುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತದಿಂದ ತತ್ತರಿಸಿತು. ಆದರೆ ರನ್ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಅಕ್ಸರ್ ಪಟೇಲ್ ನಾಲ್ಕನೇ ವಿಕೆಟ್ ಗೆ 72 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ಅಕ್ಸರ್ ಪಟೇಲ್ 31 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 47 ರನ್ ಗಳಿಸಿದ್ದಾಗ ಇಲ್ಲದ ರನ್ ಕದಿಯುವ ಯತ್ನದಲ್ಲಿ ರನೌಟ್ ಆದರೆ, ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿ ಔಟಾದರು.
ಶಿವಂ ದುಬೆ 16 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 27 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ಪರ ಏರ್ನಿಚ್ ನೊರ್ಚೆ 2 ಮತ್ತು ಕೇಶವ್ ಮಹರಾಜ್ ತಲಾ 2 ವಿಕೆಟ್ ಗಳಿಸಿದರು.