ಭಾರತೀಯ ಸೇನೆ ಶನಿವಾರ ನಡೆಸಿದ ಕಾರ್ಯಾಚರಣೆ ವೇಳೆ ಹತ್ಯೆಗೈದ ನಾಲ್ವರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದು, ಇವರು ಅಡಗಿಕೊಳ್ಳಲು ನಕಲಿ ಬೀರು ಆಶ್ರಯ ಪಡೆದಿದ್ದರು ಎಂಬುದನ್ನು ಪತ್ತೆಹಚ್ಚಿದ್ದಾರೆ.
ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚಿನ್ನಿಗಾಂವ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಹಾಗೂ ಸ್ಥಳೀಯರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಹತ್ಯೆಗೈದಿದ್ದರು. ಈ ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದರು.
ಉಗ್ರರು ಮನೆಯೊಳಗೆ ನಕಲಿ ಅಲ್ಮೆರಾ ಮಾಡಿಸಿದ್ದು, ಅದರ ಹಿಂದೆ ನಿರ್ಮಿಸಿದ್ದ ಬಂಕರ್ ಗಳಲ್ಲಿ ಅಡಗಿಕೊಂಡಿದ್ದರು. ಉಗ್ರರಿಗೆ ವಾಸ ಮಾಡಲು ಸ್ಥಳೀಯರು ಬಾಡಿಗೆ ಮನೆ ನೀಡಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೈಯ್ಯಲಾದ ನಾಲ್ವರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದು, ಇದರಲ್ಲಿ ಒಬ್ಬ ಸ್ಥಳೀಯ ಹಿಜ್ಬುಲ್ ಸಂಘಟನೆಯ ಕಮಾಂಡರ್ ಆಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.