Thursday, May 14, 2026
Google search engine
Homeಅಪರಾಧಸಂಬಂಧಿಕರಿಗೆ 1 ಕೋಟಿ ವಂಚಿಸಿದ ಬಿಜೆಪಿ ಶಾಸಕ ಶರಣು ಸಲಗರ್: ಎಫ್ ಐಆರ್ ದಾಖಲು

ಸಂಬಂಧಿಕರಿಗೆ 1 ಕೋಟಿ ವಂಚಿಸಿದ ಬಿಜೆಪಿ ಶಾಸಕ ಶರಣು ಸಲಗರ್: ಎಫ್ ಐಆರ್ ದಾಖಲು

ಬೀದರ್: 2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾಲವಾಗಿ ಪಡೆದಿದ್ದ 99 ಲಕ್ಷ ರೂ. ಹಿಂತಿರುಗಿಸದೇ ವಂಚಿಸಿದ್ದಾರೆ ಎಂದು ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಶಾಸಕರ ದೂರದ ಸಂಬಂಧಿ ಬಳಿ ಶರಣು ಸಲಗರ್ ಚುನಾವಣಾ ಸಂಬಂಧಿತ ವೆಚ್ಚಗಳಿಗಾಗಿ ಆರ್ಥಿಕ ಸಹಾಯವನ್ನು ಕೋರಿದ್ದರು. 2023ರ ಜನವರಿ ಮತ್ತು ಫೆಬ್ರುವರಿ ನಡುವೆ ಬಹು ಕಂತುಗಳಲ್ಲಿ ಹಣವನ್ನು ಪಡೆದಿದ್ದರು ಮತ್ತು 6 ತಿಂಗಳಲ್ಲಿ ಸಾಲ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.

ದೂರುದಾರರು ಎರಡು ವರ್ಷ ಕಾಯ್ದರೂ ಹಣ ಹಿಂದಿರುಗಿಸಿಲ್ಲ. ಪದೇ ಪದೆ ಹಣ ನೀಡುವಂತೆ ಕೇಳಿದರೂ ಶಾಸಕರು ಹಣ ಹಿಂದಿರುಗಿಸುವ ಯಾವುದೇ ಲಕ್ಷಣಗಳನ್ನು ತೋರಿಸದಿದ್ದಾಗ, 2025ರ ಸೆಪ್ಟೆಂಬರ್ 14 ರಂದು ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿದ್ದಾರೆ. ಅಲ್ಲಿ ಶಾಸಕರು ಹಣ ನೀಡುವುದಾಗಿ ಒಪ್ಪಿಕೊಂಡು, ಖಾಲಿ ಚೆಕ್ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 16 ರಂದು ದೂರುದಾರರ ಕುಟುಂಬ ಸದಸ್ಯರು ಚೆಕ್ ಅನ್ನು ಬ್ಯಾಕಿಂಗೆ ಹಾಕಬಹುದೇ ಎಂದು ಖಚಿತಪಡಿಸಿಕೊಳ್ಳಲು ಶಾಸಕರ ನಿವಾಸಕ್ಕೆ ಭೇಟಿ ನೀಡಿದಾಗ, ಶರಣು ಸಲಗರ್ ಗಲಾಟೆ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ದೂರುದಾರರ ಪ್ರಕಾರ, ಶಾಸಕರ ಬೆದರಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದ್ದು, ಅದನ್ನು ಎಲೆಕ್ಟ್ರಾನಿಕ್ ಪುರಾವೆಯಾಗಿ ದೂರಿನ ಜೊತೆಗೆ ಸಲ್ಲಿಸಲಾಗಿದೆ. ಅದರ ಮರುದಿನ ಸೆಪ್ಟೆಂಬರ್ 18 ರಂದು ದೂರುದಾರರ ಬ್ಯಾಂಕ್‌ಗೆ ಚೆಕ್ ಹಾಕಲು ಮುಂದಾದಾಗ, ಆ ಬ್ಯಾಂಕಿನಲ್ಲಿದ್ದ ಶಾಸಕರ ಖಾತೆ ರದ್ದುಗೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ, ಸೆಪ್ಟೆಂಬರ್ 22 ರಂದು ನಿಗದಿತ ಅವಧಿಯೊಳಗೆ ಹಣ ಪಾವತಿಸುವಂತೆ ಕೋರಿ ಶಾಸಕರಿಗೆ ಕಾನೂನು ನೋಟಿಸ್ ನೀಡಲಾಗಿದೆ. ಆದರೂ  ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ, ಡಿಸೆಂಬರ್ 27 ರಂದು ಬಸವ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109 (ಕೊಲೆ ಯತ್ನ), 314 (ಅಪ್ರಾಮಾಣಿಕ ಆಸ್ತಿ ದುರುಪಯೋಗ), 318 (ವಂಚನೆ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 351 (ಕ್ರಿಮಿನಲ್ ಬೆದರಿಕೆ) ಮತ್ತು 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವಂತ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments