Wednesday, June 17, 2026
Google search engine
Homeದೇಶಕೆಮ್ಮಿನ ಸಿರಪ್ ನೇರ ಮಾರಾಟ ನಿಷೇಧಿಸಿ ಕೇಂದ್ರ ಮಹತ್ವದ ಆದೇಶ

ಕೆಮ್ಮಿನ ಸಿರಪ್ ನೇರ ಮಾರಾಟ ನಿಷೇಧಿಸಿ ಕೇಂದ್ರ ಮಹತ್ವದ ಆದೇಶ

ನವದೆಹಲಿ: ಅಕ್ರಮ ಹಾಗೂ ಕಳಪೆ ಮಾರಾಟ ತಡೆಯಲು ಕೇಂದ್ರ ಸರ್ಕಾರ ವೈದ್ಯರ ಸಲಹೆ ಇಲ್ಲದೇ ಕೆಮ್ಮಿನ ಸಿರಪ್ ಗಳ ಮಾರಾಟ ನಿಷೇಧಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಔಷಧಿ ಅಂಗಡಿಗಳಲ್ಲಿ ಔಷಧ ಮಾರಾಟದ ನಿಯಮಗಳಿಗೆ ತಿದ್ದುಪಡಿ ತಂದಿದೆ. ಮುಖ್ಯವಾಗಿ, ಕೆಮ್ಮಿನ ಸಿರಪ್​ ಅನ್ನು ವೈದ್ಯರ ಸಲಹೆ ಇಲ್ಲದೆ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಕೆಮ್ಮಿನ ಸಿರಪ್ ಸೇರಿದಂತೆ ದ್ರವರೂಪದ ಔಷಧಿಗಳನ್ನು ವೈದ್ಯರ ಚೀಟಿ (ಪ್ರಿಸ್ಕ್ರಿಪ್ಷನ್) ಇಲ್ಲದೆ ರೋಗಿಗಳು ಅಥವಾ ಸಾರ್ವಜನಿಕರಿಗೆ ಮಾರಾಟ ಮಾಡುವಂತಿಲ್ಲ ಎಂದು ಔಷಧಗಳ (ಐದನೇ ತಿದ್ದುಪಡಿ) ನಿಯಮಗಳು-2026 ರ ಅಡಿ ಜೂನ್ 9ರಂದು ಹೊರಡಿಸಲಾದ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ನಿಯಮವು ಗೆಜೆಟ್​ ಪ್ರಕಟವಾದ ತಕ್ಷಣದಿಂದಲೇ ಜಾರಿಗೆ ಬಂದಿದೆ.

ತಿದ್ದುಪಡಿಯ ಪ್ರಕಾರ, 1945ರ ಔಷಧ ನಿಯಮಗಳ ಶೆಡ್ಯೂಲ್ ಕೆ ಸರಣಿ ಸಂಖ್ಯೆ 13ರ ಅಡಿಯಲ್ಲಿ ಬರುವ ಐಟಂ ಸಂಖ್ಯೆ 7 ರಿಂದ ಸಿರಪ್ಸ್ ಎಂಬ ಪದವನ್ನು ತೆಗೆದುಹಾಕಲಾಗಿದೆ. ಶೆಡ್ಯೂಲ್ ಕೆ ಪಟ್ಟಿಯು 1940 ರ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ ಅಧ್ಯಾಯ 4ರ ಕೆಲವು ಕಠಿಣ ನಿಬಂಧನೆಗಳಿಂದ ವಿನಾಯಿತಿ ಪಡೆದ ಔಷಧಿಗಳ ವರ್ಗಗಳನ್ನು ಒಳಗೊಂಡಿರುತ್ತದೆ. ಈಗ ಈ ಪಟ್ಟಿಯಿಂದ ಸಿರಪ್‌ಗಳನ್ನು ಹೊರಗಿಟ್ಟಿರುವುದರಿಂದ, ಇನ್ಮುಂದೆ ಕಠಿಣ ನಿಯಂತ್ರಣ ನಿಯಮಗಳಿಗೆ ಒಳಪಡಲಿವೆ.

ಜನರ ಬೇಡಿಕೆ ಮೇರೆಗೆ ನಿಯಂತ್ರಣ: ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿ ಸಾರ್ವಜನಿಕರಿಂದ ಈ ಕುರಿತು ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಹೆಚ್ಚಿನ ಪ್ರಮಾಣದ ಜನರು ಸಿರಪ್​ಗಳನ್ನು ಮೆಡಿಕಲ್​ ಶಾಪ್​ಗಳ ಕೌಂಟರ್​ಗಳಲ್ಲಿ ನೇರವಾಗಿ ಮಾರಾಟ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ದೇಶದ ಅತ್ಯುನ್ನತ ಔಷಧ ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ) ಜೊತೆ ಸಮಾಲೋಚನೆ ನಡೆಸಿದ ನಂತರ ಮತ್ತು ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಶೀಲಿಸಿದ ಬಳಿಕವೇ ಈ ತಿದ್ದುಪಡಿಯನ್ನು ಅಂತಿಮಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸಿರಪ್​​ ಸೇವಿಸಿ ಮಕ್ಕಳ ಸಾವು ಪ್ರಕರಣ: ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಗುಣಮಟ್ಟವಲ್ಲದ ಮತ್ತು ಅಪಾಯಕಾರಿ ಕೆಮಿಕಲ್​ ಮಿಶ್ರಣದ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಮೃತಪಟ್ಟಿದ್ದವು. ಈ ಘಟನೆಯ ನಂತರ ದ್ರವರೂಪದ ಔಷಧಿಗಳ ಮೇಲಿನ ಕಣ್ಗಾವಲನ್ನು ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿತ್ತು.

ಹೊಸ ನಿಯಮದಿಂದಾಗಿ ಇನ್ಮುಂದೆ ಸಿರಪ್ ತಯಾರಕರು ಮತ್ತು ಮಾರಾಟಗಾರರು ಕಟ್ಟುನಿಟ್ಟಾದ ಲೈಸೆನ್ಸ್ ಮತ್ತು ಗುಣಮಟ್ಟದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ಔಷಧಿಗಳ ದುರುಪಯೋಗವನ್ನು ತಡೆಯಬಹುದು ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments