ನವದೆಹಲಿ: ಎಲ್ ನಿನೊ ಪರಿಣಾಮ ತೀವ್ರವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಭೆ ನಡೆಸಿ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು) ಮತ್ತು ಇತರ ವಿಸ್ತರಣಾ ಸಂಸ್ಥೆಗಳೊಂದಿಗೆ ಸಂಘಟಿತ ಸಭೆಗಳನ್ನು ನಡೆಸಲು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
2026ರ ಮುಂಗಾರು ಹಂಗಾಮಿನ ಬೆಳೆಗಳ ಸಿದ್ಧತೆಗಳ ಕುರಿತು ಸಾಪ್ತಾಹಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಮಳೆ ಕೊರತೆ ಇರುವ ಜಿಲ್ಲೆಗಳಲ್ಲಿ ಮುಂಗಡ ತುರ್ತು ಯೋಜನೆಯ ಅಗತ್ಯವನ್ನು ಒತ್ತಿ ಹೇಳಿದ್ದು, ಹತ್ತಿ ಮತ್ತು ದ್ವಿದಳ ಧಾನ್ಯಗಳ ಬೆಳೆಯ ವಿಸ್ತೀರ್ಣ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ರೈತರಿಗೆ ಆಯ್ಕೆಗಳು, ಸಲಹೆ ಮತ್ತು ಸಹಾಯವನ್ನು ತ್ವರಿತವಾಗಿ ಒದಗಿಸಲು ಸಾಧ್ಯವಾಗುವಂತೆ, ದುರ್ಬಲ ಜಿಲ್ಲೆಗಳನ್ನು ಸ್ಪಷ್ಟವಾಗಿ ಗುರುತಿಸಲು ಮತ್ತು ಬೆಳೆವಾರು ತುರ್ತು ಯೋಜನೆಗಳನ್ನು ಮುಂಚಿತವಾಗಿ ಸಿದ್ಧಪಡಿಸಲು ಚೌಹಾಣ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿ ದುರ್ಬಲ ಜಿಲ್ಲೆಗೆ ಪ್ರತ್ಯೇಕ ಮತ್ತು ಪ್ರಾಯೋಗಿಕ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಬೇಕು, ನೀರಿನ ಸಂರಕ್ಷಣೆ, ತೇವಾಂಶ ನಿರ್ವಹಣೆ, ಅಂತರ ಬೆಳೆ ಮತ್ತು ಪರ್ಯಾಯ ಬೆಳೆ ಮಾದರಿಗಳಿಗೆ ವಿಶೇಷ ಗಮನ ನೀಡಬೇಕು ಎಂದು ಅವರು ಹೇಳಿದರು.
ಎಚ್ಚರಿಕೆ ನೀಡುವ ಸಂದೇಶಗಳಲ್ಲದೇ ರೈತರು ವೈಜ್ಞಾನಿಕ ವಿಶ್ಲೇಷಣೆಯ ಆಧಾರದ ಮೇಲೆ ಶಾಂತ, ವಿಶ್ವಾಸಾರ್ಹ ಮತ್ತು ಪರಿಹಾರ – ಆಧಾರಿತ ಸಂದೇಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ಒತ್ತಿ ಹೇಳಿದರು.
ಸಭೆಯಲ್ಲಿ ಬೆಳೆವಾರು ಗುರಿಗಳು, ಬಿತ್ತನೆ ಪ್ರಗತಿ ಮತ್ತು ರಾಜ್ಯವಾರು 2026ರ ಮುಂಗಾಳು ಬೆಳೆ ಸಿದ್ಧತೆಗಳನ್ನು ವಿಶೇಷವಾಗಿ ಹತ್ತಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಹೆಚ್ಚು ಒತ್ತು ನೀಡಿ ಚರ್ಚಿಸಲಾಯಿತು. ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಯಿತು.
ಉತ್ಪಾದಕತೆ ಮತ್ತು ಕೃಷಿ ಆದಾಯ ಎರಡನ್ನೂ ಸುಧಾರಿಸಲು ವೈಜ್ಞಾನಿಕ ವಿಧಾನಗಳು, ಸರಿಯಾದ ತಳಿ ಆಯ್ಕೆ, ಅಂತರ ಬೆಳೆ, ಹಸಿಗೊಬ್ಬರ ಹಾಕುವಿಕೆ ಮತ್ತು ತೇವಾಂಶ ಸಂರಕ್ಷಣೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವಂತೆ ಚೌಹಾಣ್ ಕರೆ ನೀಡಿದ್ದಾರೆ.
ಎಲ್ ನಿನೋ ಎದುರಿಸಲು ಅಗತ್ಯಕ್ರಮ:
ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಬೆಳೆ ರೊಟೇಶನ್, ಪ್ರದೇಶ ವಿಸ್ತರಣೆ, ಸುಧಾರಿತ ಬೀಜ ಲಭ್ಯತೆ ಮತ್ತು ತಾಂತ್ರಿಕ ಮಾರ್ಗದರ್ಶನದ ಮೂಲಕ ತೊಗರಿ, ಉದ್ದು ಮತ್ತು ಹೆಸರುಕಾಳಿನ ಕೃಷಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಚೌಹಾಣ್ ಹೇಳಿದರು.
ರಸಗೊಬ್ಬರ ಲಭ್ಯತೆ, ಮಾರುಕಟ್ಟೆ ಬೆಲೆಗಳು, ಜಲಾಶಯದ ಮಟ್ಟಗಳು ಮತ್ತು ರಾಜ್ಯಗಳಾದ್ಯಂತ ನೀರಿನ ಸಂಗ್ರಹ ಸ್ಥಿತಿಯನ್ನೂ ಪರಿಶೀಲಿಸಲಾಗುತ್ತಿದೆ.
ರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಪೂರೈಕೆ ಸಮರ್ಪಕವಾಗಿದ್ದು, ಮಳೆಗಾಲ ಮುಂದುವರೆದಂತೆ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಮತ್ತಷ್ಟು ಸುವ್ಯವಸ್ಥಿತಗೊಳಿಸಲಾಗುವುದು ಎಂದು ಚೌಹಾಣ್ ಭರವಸೆ ನೀಡಿದರು. ಸೂಕ್ಷ್ಮ ಮಟ್ಟದ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಮುಂಚಿತವಾಗಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೃಷಿ ವಿಶ್ವವಿದ್ಯಾಲಯಗಳು, ಐಸಿಎಆರ್ ಸಂಸ್ಥೆಗಳು, ಕೆವಿಕೆಗಳು ಮತ್ತು ರಾಜ್ಯ ಕೃಷಿ ಇಲಾಖೆಗಳ ನಡುವೆ ಬಿಗಿಯಾದ ಸಮನ್ವಯದ ಅಗತ್ಯವನ್ನು ಒತ್ತಿ ಹೇಳಿದ ಚೌಹಾಣ್, ತಾಂತ್ರಿಕ ಜ್ಞಾನ ಸಕಾಲಕ್ಕೆ ಹೊಲಗಳಿಗೆ ತಲುಪಿದಾಗ ಮಾತ್ರ ಅರ್ಥಪೂರ್ಣವಾಗಿರುತ್ತದೆ ಎಂದರು.
ಯಶಸ್ವಿ ಮತ್ತು ಸುರಕ್ಷಿತ ಮುಂಗಾರು ಬೆಳೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಸಂವಾದ, ನಿಯಮಿತ ವಿಮರ್ಶೆಗಳು ಮತ್ತು ಆನ್ – ಗ್ರೌಂಡ್ ಪ್ರತಿಕ್ರಿಯೆ ನಡೆಸುವಂತೆ ಅವರು ಕರೆ ನೀಡಿದರು.



