ಬೆಳಗಾವಿ: ಇಲ್ಲಿನ ಕೈಗಾರಿಕಾ ಪ್ರದೇಶವಾದ ಉದ್ಯಮಬಾಗದಲ್ಲಿ ಪೌರಕಾರ್ಮಿಕರು ಕಸ ವಿಲೇವಾರಿ ಮಾಡುತ್ತಿದ್ದ ವೇಳೆ ಕಸದ ರಾಶಿಯಲ್ಲಿ ಬರೋಬ್ಬರಿ 59 ಜೀವಂತ ಗುಂಡುಗಳು ಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ.
ಪೌರಕಾರ್ಮಿಕರು ಎಂದಿನಂತೆ ಉದ್ಯಮಬಾಗದ ರಸ್ತೆಯ ಬದಿಯಲ್ಲಿ ಸಂಗ್ರಹವಾದ ಕಸವನ್ನು ವಿಂಗಡನೆ ಮಾಡುತ್ತಿದ್ದ ವೇಳೆ ಈ ಜೀವಂತ ಗುಂಡುಗಳು ಪತ್ತೆಯಾಗಿವೆ. ಇದನ್ನು ಕಂಡು ಬೆಚ್ಚಿಬಿದ್ದ ಪೌರ ಕಾರ್ಮಿಕರು ತಕ್ಷಣವೇ ಉದ್ಯಮಬಾಗ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಮಹಾಂತೇಶ ಹೊಸಪೇಟೆ ಮತ್ತು ಅವರ ತಂಡವು ಪರಿಶೀಲನೆ ನಡೆಸಿತು. ಒಟ್ಟು 59 ಗುಂಡುಗಳು ಪತ್ತೆ ಆಗಿವೆ. ಆ ಪೈಕಿ 41 ಒಂದು ಮಾದರಿ, 18 ಮತ್ತೊಂದು ಮಾದರಿಯ ಗುಂಡುಗಳಾಗಿವೆ. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಸ್ಥಳದಲ್ಲಿ ಮಹಜರು ನಡೆಸಿರುವ ಪೊಲೀಸರು, ಗುಂಡುಗಳನ್ನು ಜಪ್ತಿ ಮಾಡಿದ್ದಾರೆ. ಈ ಗುಂಡುಗಳು ಇಲ್ಲಿಗೆ ಹೇಗೆ ಬಂದವು..? ಇವುಗಳನ್ನು ಕಸದ ತೊಟ್ಟಿಯಲ್ಲಿ ಬಿಸಾಡಿದವರು ಯಾರು? ಇವುಗಳ ಬಳಕೆ ಎಲ್ಲಿಯಾದರೂ ಆಗಿದೆಯೇ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ತನಿಖೆಯನ್ನು ಕೈಗೊಂಡಿದ್ದಾರೆ.



