Monday, May 25, 2026
Google search engine
Homeದೇಶಅರುಣಾಚಲದ 30ಕ್ಕೂ ಹೆಚ್ಚು ಸ್ಥಳಗಳಿಗೆ ಚೀನಾ ಹೆಸರು: ಭಾರತದಿಂದ ತೀವ್ರ ವಿರೋಧ

ಅರುಣಾಚಲದ 30ಕ್ಕೂ ಹೆಚ್ಚು ಸ್ಥಳಗಳಿಗೆ ಚೀನಾ ಹೆಸರು: ಭಾರತದಿಂದ ತೀವ್ರ ವಿರೋಧ

ಇಟಾನಗರ: ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಸಾಬೀತುಪಡಿಸಲು ಚೀನಾವು ಇತ್ತೀಚೆಗೆ ಅರುಣಾಚಲ ಪ್ರದೇಶದ 30ಕ್ಕೂ ಹೆಚ್ಚು ಸ್ಥಳಗಳಿಗೆ ಹೊಸ ಹೆಸರುಗಳನ್ನು ನೀಡಿದೆ. ಈ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದ್ದು, “ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಅತೀವ ಭಾಗವಾಗಿದ್ದು, ಹೆಸರು ಬದಲಾವಣೆಯಂತಹ ಕೃತಕ ಕ್ರಮಗಳಿಂದ ಏನೂ ಬದಲಾಗದು ಎಂದಿದೆ.

ಚೀನಾದ ಈ ‘ಸ್ಟ್ಯಾಂಡಡರ್್ ಜಿಯೋಗ್ರಾಫಿಕಲ್ ನೇಮ್ಸ್’ ಕಾರ್ಯಕ್ರಮವು ಈಗಾಗಲೇ ನಾಲ್ಕನೇ ಬಾರಿಗೆ ಜಾರಿಗೆ ಬಂದಿದೆ. 2017, 2021, 2023 ಮತ್ತು ಈಗ 2024ರಲ್ಲಿ ಚೀನಾ ಇಂತಹ ಹೆಸರು ಬದಲಾವಣೆಯ ಪಟ್ಟಿಗಳನ್ನು ಪ್ರಕಟಿಸಿದೆ.

ಈ ಬಾರಿಯ ಪಟ್ಟಿಯಲ್ಲಿ ಗಿರಿಗಳು, ನದಿಗಳು, ಸರೋವರಗಳು, ಹಳ್ಳಿಗಳು, ಪಟ್ಟಣಗಳು, ರಸ್ತೆಗಳು ಮತ್ತು ಇತರ ಭೌಗೋಳಿಕ ರಚನೆಗಳು ಸೇರಿವೆ. ಈ ಹೆಸರುಗಳನ್ನು ಚೀನಾದ ‘ಪೀಪಲ್ಸ್ ಲಿಂಗ್ವಿಸ್ಟಿಕ್ ಪಬ್ಲಿಕೇಶನ್ ಹೌಸ್’ ಸಂಸ್ಥೆಯ ಮೂಲಕ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಚೀನಾ ಅರುಣಾಚಲ ಪ್ರದೇಶವನ್ನು ‘ಝಾಂಗ್ನಾನ್’ ಎಂದು ಕರೆಯುತ್ತಿದ್ದು, ಅದನ್ನು ತನ್ನ ತಿಬೆಟ್ ಸ್ವಾಯತ್ತ ಪ್ರದೇಶದ ಭಾಗವೆಂದು ಪರಿಗಣಿಸುತ್ತಿದೆ. ಈ ಉದ್ದೇಶದಿಂದ ಚೀನಾ ನಕ್ಷೆಗಳಲ್ಲಿ ತಿದ್ದುಪಡಿ, ಸೇನಾ ಚಟುವಟಿಕೆಗಳು, ಹೆಸರು ಬದಲಾವಣೆ ಮತ್ತು ರಾಜತಾಂತ್ರಿಕ ಪ್ರಚಾರಗಳ ಮೂಲಕ ತನ್ನ ಹಕ್ಕನ್ನು ಸ್ಥಾಪಿಸಲು ಯತ್ನಿಸುತ್ತಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಭಾಗವಾಗಿದೆ. ಚೀನಾದ ಯಾವುದೇ ನಾಮಕರಣ, ನಕ್ಷೆ ತಿದ್ದುಪಡಿ ಅಥವಾ ಸಾರ್ವಜನಿಕ ಹೇಳಿಕೆಗಳಿಂದ ಈ ಸತ್ಯಕ್ಕೆ ಯಾವುದೇ ಬದಲಾವಣೆ ಉಂಟಾಗುವುದಿಲ್ಲ” ಎಂದು ತಿಳಿಸಿದ್ದಾರೆ.

ಲಘು ಸಮರ ತಂತ್ರ

ರಕ್ಷಣಾ ತಜ್ಞರು ಮತ್ತು ರಾಜತಾಂತ್ರಿಕರು ಚೀನಾದ ಈ ಕ್ರಮವನ್ನು ಕೇವಲ ಭಾಷಾ ವ್ಯಾಯಾಮವೆಂದು ಪರಿಗಣಿಸದೇ, ಲಘು ಸಮರ ತಂತ್ರವೆಂದು ವಿಶ್ಲೇಷಿಸಿದ್ದಾರೆ.

ಹೆಸರು ಬದಲಾವಣೆಯ ಮೂಲಕ ಚೀನಾ ಆ ಭೂಭಾಗದೊಂದಿಗೆ ತನ್ನ ಐತಿಹಾಸಿಕ ಸಂಬಂಧವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಆದರೆ, ಈ ತರ್ಕವನ್ನು ಭಾರತ ಮಾತ್ರವಲ್ಲ, ಅಂತರರಾಷ್ಟ್ರೀಯ ಸಮುದಾಯವೂ ತಿರಸ್ಕರಿಸಿದೆ.

ಅರುಣಾಚಲ ಪ್ರದೇಶದ ರಾಜಕೀಯ ನಾಯಕರು ಮತ್ತು ಸ್ಥಳೀಯ ಜನತೆ ಚೀನಾದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ. “ಅರುಣಾಚಲ ಭಾರತದ ಅವಿಭಾಜ್ಯ ಭಾಗವಾಗಿದ್ದು, ಯಾವತ್ತೂ ಬೇರ್ಪಡುವುದಿಲ್ಲ” ಎಂದು ಘೋಷಿಸಿದ್ದಾರೆ.

ಕೇಂದ್ರ ಸಚಿವ ಮತ್ತು ಅರುಣಾಚಲದ ನಾಯಕ ಕಿರೆನ್ ರಿಜಿಜು, “ಅರುಣಾಚಲದ ಜನತೆ ದೇಶಭಕ್ತರಾಗಿದ್ದಾರೆ. ಈ ರಾಜ್ಯ ಯಾವತ್ತೂ ಭಾರತದ ಭಾಗವಾಗಿಯೇ ಉಳಿಯುತ್ತದೆ. ಚೀನಾದ ಹೆಸರುಗಳಿಗೆ ಇಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಹೇಳಿದ್ದಾರೆ.

ಭಾರತ-ಚೀನಾ ಗಡಿಯ ಈ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಇದು ಕೇವಲ ರಾಜಕೀಯ ನಡೆಯಲ್ಲ. ಇದು ರಾಷ್ಟ್ರೀಯ ಭದ್ರತೆ, ಭೌಗೋಳಿಕ ಸಮಗ್ರತೆ ಮತ್ತು ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ. ತಜ್ಞರು ಚೀನಾದ ಈ ಕ್ರಮವನ್ನು ಏಕಪಕ್ಷೀಯ ಮತ್ತು ಪ್ರಚೋದನಾತ್ಮಕವೆಂದು ಎಚ್ಚರಿಸಿದ್ದಾರೆ.

2020ರ ಗಲ್ವಾನ್ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧ ಗಂಭೀರ ಬಿಕ್ಕಟ್ಟಿನಲ್ಲಿದ್ದು, ಗಡಿ ವಿವಾದವು ನಿರಂತರವಾಗಿ ರಾಜಕೀಯ ಸವಾಲಾಗಿ ಉಳಿದಿದೆ.

ಭಾರತವು ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಗಡಿಚಿಹ್ನೆಗಳ ದೃಢೀಕರಣ ಮತ್ತು ಸೇನಾ ನೆಲೆಗಳ ಬಲವರ್ಧನೆಯ ಮೂಲಕ ತನ್ನ ಸಾರ್ವಭೌಮತೆಯ ಬದ್ಧತೆಯನ್ನು ತೋರಿಸಿದೆ. ಚೀನಾದ ಈ ಹೆಸರು ಬದಲಾವಣೆ ಕ್ರಮದ ಹಿಂದಿನ ಉದ್ದೇಶವನ್ನು ಪ್ರಶ್ನಿಸುವ ಧ್ವನಿಗಳು ದೇಶದೊಳಗೆ ಜೋರಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments