ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಸ್ಥಳ ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ.
ಕಾವೇರಿ ಮತ್ತು ಅರ್ಕಾವತಿ ನದಿಯ ಸಂಗಮದ ಕೆಳಭಾಗದಿಂದ ಸುಮಾರು 2 ಕಿ.ಮೀ ದೂರದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಹಲವು ಅಧ್ಯಯನ ಬಳಿಕ ಸ್ಥಳ ಆಯ್ಕೆ ಮಾಡಲಾಗಿದ್ದು, 99 ಮೀಟರ್ ಎತ್ತರ ಅಣೆಕಟ್ಟು ನಿರ್ಮಿಸುವ ಅಂದಾಜಿದೆ.
ಈ ಅಣೆಕಟ್ಟು ನಿರ್ಮಾಣವಾದ್ರೆ ನೀರಿನ ಸಾಮರ್ಥ್ಯ ಸುಮಾರು 67.16 ಟಿಎಂಸಿ ಇರಲಿದೆ. ಅಂದರೆ ಕೆಆರ್‌ಎಸ್ 49 ಟಿಎಂಸಿ ಸಾಮರ್ಥ್ಯ ಹೊಂದಿದ್ದರೆ; ಅದಕ್ಕಿಂತ 18 ಟಿಎಂಸಿಯಷ್ಟು ಹೆಚ್ಚಿನ ಸಾಮರ್ಥ್ಯವನ್ನ ಮೇಕೆದಾಟು ಹೊಂದಿರಲಿದೆ. ಈ ಅಣೆಕಟ್ಟು ನಿರ್ಮಾಣಕ್ಕೆ ಮುಂದಾದ್ರೆ ಸುಮಾರು 5,173 ಹೆಕ್ಟೆರ್ ಭೂಮಿ ಮುಳುಗಡೆ ಆಗಲಿದೆ
ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡುಬರುವ ಪ್ರಸ್ತುತ ಸ್ಥಳದ ಮೇಲ್ಭಾಗ ಅಥವಾ ಕೆಳಭಾಗದಲ್ಲಿ ನೀರಿನ ಸಂಗ್ರಹಕ್ಕೆ ಸ್ಥಳವಿಲ್ಲ ಅಂತ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು, ವಿದ್ಯುತ್ ಪೂರೈಕೆಗೆ ಸಹಕಾರಿ ಆಗುವುದರ ಜೊತೆಗೆ, ತಮಿಳುನಾಡಿಗೆ ನೀರು ಹರಿಸಲು ಅನುಕೂಲ ಆಗಲಿದೆ ಅಂತ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.



