Thursday, August 13, 2026
Google search engine
Homeದೇಶಉತ್ತರ ಭಾರತದ 25 ಭಾಷೆಗಳನ್ನು ನಾಶಗೊಳಿಸಿದ ಹಿಂದಿ: ಎಂಕೆ ಸ್ಟಾಲಿನ್ ಗಂಭೀರ ಆರೋಪ

ಉತ್ತರ ಭಾರತದ 25 ಭಾಷೆಗಳನ್ನು ನಾಶಗೊಳಿಸಿದ ಹಿಂದಿ: ಎಂಕೆ ಸ್ಟಾಲಿನ್ ಗಂಭೀರ ಆರೋಪ

ಕೇಂದ್ರ ಸರ್ಕಾರ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ತ್ರಿಭಾಷಾ ವಿವಾದ ಇದೀಗ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕಳೆದ 100 ವರ್ಷಗಳಲ್ಲಿ ಉತ್ತರ ಭಾರತದ ೨೫ ಭಾಷೆಗಳನ್ನು ಹಿಂದಿ ಭಾಷೆ ಧ್ವಂಸಗೊಳಿಸಿದೆ ಎಂಬ ಗಂಭೀರ ಆರೋಪದಿಂದ ಮತ್ತೊಂದು ತಿರುವು  ಪಡೆದಿದೆ.

ಉತ್ತರ ಪ್ರದೇಶ ಮತ್ತು ಬಿಹಾರ ಹಿಂದಿ ಭಾಷಾ ರಾಜ್ಯಗಳೇ ಆಗಿರಲಿಲ್ಲ. ಆದರೆ ಇದೀಗ ಕೇಂದ್ರದ ಹಿಂದಿ ಹೇರಿಕೆಯಿಂದಾಗಿ ಆ ರಾಜ್ಯಗಳು ಹಿಂದಿ ರಾಜ್ಯಗಳಾಗಿ ಬದಲಾಗಿವೆ. ಹಿಂದಿ ಹೇರಿಕೆಯಿಂದಾಗಿ 25ಕ್ಕೂ ಹೆಚ್ಚು ದೀರ್ಘ ಇತಿಹಾಸ ಹೊಂದಿದ್ದ ಭಾಷೆಗಳು ನಾಶವಾಗಿವೆ ಎಂದು ಸ್ಟಾಲಿನ್ ಆರೋಪಿಸಿದರು.

ಅತ್ಯಂತ ಪ್ರಬಲ ಹಾಗೂ ಸುದೀರ್ಘ ಇತಿಹಾಸ ಹೊಂದಿರುವ ಭಾಷೆಗಳು ಹಿಂದಿ ಹೇರಿಕೆ ವಿರುದ್ಧ ಸೆಡ್ಡು ಹೊಡೆಯುವ ಕಾಲ ಬಂದಿದೆ. ನಾವು ಭಾಷಾ ಹೇರಿಕೆ ವಿರುದ್ಧ ಹೋರಾಟ ಮಾಡದೇ ಇದ್ದರೆ ಮುಂದೊಂದು ದಿನ ನಮ್ಮ ಮಾತೃಭಾಷೆಯನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಗುರುವಾರ ಬೆಳಿಗ್ಗೆ ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸ್ಟಾಲಿನ್, ತಮಿಳು ನಾಯಕರು 2026 ಚುನಾವಣೆ ಹಿನ್ನೆಲೆಯಲ್ಲಿ ಹಿಂದಿ ಹೇರಿಕೆ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂಬ ಬಿಜೆಪಿಯ ಆರೋಪ ಪ್ರಸ್ತಾಪಿಸಿರುವ ಅವರು, ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಹಾಳು ಮಾಡಲು ಯತ್ನಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ತ್ರಿ ಭಾಷಾ ಸೂತ್ರದಡಿ ಯಾವುದೇ ವಿದ್ಯಾರ್ಥಿ ದೇಶದ ಯಾವುದೇ ಭಾಗದಲ್ಲಿ ಯಾವುದೇ ಭಾಷೆಯನ್ನು ಕಲಿಕೆಯಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ಆದರೆ ತಮಿಳು ಭಾಷೆಯನ್ನು ತಮಿಳುನಾಡು ಹೊರತುಪಡಿಸಿ ಯಾವುದೇ ರಾಜ್ಯದಲ್ಲಿ ಕಲಿಸುವುದೇ ಇಲ್ಲ. ಹಿಂದಿಯನ್ನೇ ಆಯ್ಕೆ ಮಾಡುವ ಪರಿಸ್ಥಿತಿಗೆ ವಿದ್ಯಾರ್ಥಿಗಳನ್ನು ತಳ್ಳಲಾಗುತ್ತದೆ ಎಂದು ಸ್ಟಾಲಿನ್ ವಿವರಿಸಿದ್ದಾರೆ.

ಭೋಜ್ ಪುರಿ, ಮೈಥಿಲಿ, ಅವಧಿ, ಬ್ರಜ್, ಬುಂದೇಲಿ, ಗರ್ವಾಲಿ, ಕುಮಾವೊನಿ, ಮಗಹಿ, ಮಾರ್ವಾರಿ, ಮಾಲ್ವಿ, ಛತ್ತೀಸ್ ಗಢಿ, ಸಂತಾಲಿ, ಅಂಗಿಕಾ, ಹೋ, ಖಾರಿಯಾ, ಖೋರ್ತಾ, ಕುರ್ಮಾಲಿ, ಕುರುಖ್, ಮುಂಡಾರಿ ಮತ್ತು ಇನ್ನೂ ಅನೇಕ ಭಾಷೆಗಳು ಈಗ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿವೆ. ಏಕರೂಪದ ಹಿಂದಿ ಅಸ್ಮಿತೆಯ ಹೇರುವಿಕೆಯು ಪ್ರಾಚೀನ ಮಾತೃಭಾಷೆಗಳನ್ನು ಕೊಲ್ಲುತ್ತದೆ. ಉತ್ತರ ಪ್ರದೇಶ ಮತ್ತು ಬಿಹಾರ ಎಂದಿಗೂ ಕೇವಲ ‘ಹಿಂದಿ ಹೃದಯಭಾಗ’ಗಳಾಗಿರಲಿಲ್ಲ. ಅವರ ನಿಜವಾದ ಭಾಷೆಗಳು ಈಗ ಗತಕಾಲದ ಅವಶೇಷಗಳಾಗಿವೆ. ಇದರ ಪರಿಣಾಮ ಏನಾಗಲಿದೆ ಎಂಬುದು ನಮಗೆ ಗೊತ್ತಿರುವುದರಿಂದಲೇ ತಮಿಳುನಾಡು ಇದನ್ನು ಪ್ರತಿರೋಧಿಸುತ್ತದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ತ್ರಿಭಾಷಾ ಸೂತ್ರದ ಬಗ್ಗೆ ತಮಿಳುನಾಡು ಹಾಗೂ ದಕ್ಷಿಣದ ಇತರ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸ್ಟಾಲಿನ್ ಅವರ ತೀಕ್ಷ್ಣವಾದ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

ತಮಿಳುನಾಡು ಹಿಂದಿ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಿದ್ದು, 1967 ರಿಂದ ದ್ವಿಭಾಷಾ ನೀತಿ ಅಳವಡಿಸಿಕೊಂಡಿದೆ. ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಲು ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಪ್ರಯತ್ನಿಸಿದ ನಂತರ ತಮಿಳುನಾಡಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಅದರ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರದಿದ್ದರೆ ತಮಿಳುನಾಡಿಗೆ ನೀಡಬೇಕಾಗಿರುವ 2,400 ಕೋಟಿ ರೂ.ಗಳ ನಿಧಿಯನ್ನು ತಡೆಹಿಡಿಯುವುದಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ ನಂತರ ಭಾಷಾ ವಿವಾದ ಈಗ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಚಿವ ಪ್ರಧಾನ್ ಮಾತಿಗೆ ಸಿಎಂ ಸ್ಟಾಲಿನ್ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಟಾಲಿನ್ ಆರೋಪದ ಬೆನ್ನಲ್ಲೇ ಬಿಜೆಪಿ ಇದೊಂದು ಕ್ಷುಲಕ ವಿಷಯ ಎಂದು ಪ್ರತಿಕ್ರಿಯಿಸಿದೆ. ಅಲ್ಲದೇ ಚುನಾವಣಾ ತಂತ್ರಗಾರಿಕೆಗೆ ಭಾಷಾ ನೀತಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments