ಬೆಂಗಳೂರು: ಉಗ್ರರ ದಾಳಿ ಹಾಗೂ ಸಮಾಜ ಘಾತುಕ ಕೃತ್ಯಗಳ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಡ್ರೋಣ್ ಹಾರಾಟ ನಿಷೇಧಿಸಲಾಗಿದೆ.
ಭಯೋತ್ಪಾದಕರು, ದೇಶ ವಿರೋಧಿಗಳು ಡ್ರೋನ್ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರಾಫ್ಟ್ಗಳು ಹಾಗೂ ಪ್ಯಾರಾಗ್ಲೈಡರ್ ಬಳಸಿ ದಾಳಿಯ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿ ನಾಶಪಡಿಸಿ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಕ್ಷ್ಮ ವಲಯಗಳಲ್ಲಿ ಖಾಸಗಿ ಡ್ರೋನ್ ಚಟುವಟಿಕೆ ನಿಷೇಧಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಬಿಗುವಿನ ವಾತಾವರಣ ಈಗ ಶಮನಗೊಂಡಿದೆ. ಅದಾಗ್ಯೂ ತುರ್ತು ಸಂದರ್ಭಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಸೂಕ್ಷ್ಮವಲಯಗಳನ್ನು ಗುರುತಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಭದ್ರತಾ ಕಾಳಜಿಗಳ ದೃಷ್ಟಿಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವ ಎಲ್ಲಾ ಖಾಸಗಿ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ನೀಡಲಾಗಿದೆ. ಕಣ್ಗಾವಲು ಅಥವಾ ಇತರ ಉದ್ದೇಶಗಳಿಗಾಗಿ ಡ್ರೋನ್ಗಳನ್ನು ನಿಯೋಜಿಸುವುದನ್ನು ತಪ್ಪಿಸಲು ಸಲಹೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಸೂಕ್ಷ್ಮವಲಯಗಳು:
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇಂಡಿಯನ್ ಆಯಿಲ್ ಸ್ಕೈಟ್ಯಾಂಕಿಂಗ್
ದೊಡ್ಡಬಳ್ಳಾಪುರ : ಮುಶಾಶಿ ಆಟೋ ಪಾರ್ಟ್ಸ್ ಪ್ರೈ. ಲಿಮಿಟೆಡ್
ಹೊಸಕೋಟೆ : ಐಒಸಿಎಲ್ I ಇಂಡೇನ್ ಬಾಟ್ಲಿಂಗ್ ಪ್ಲಾಂಟ್, ಬಿಪಿಸಿಎಲ್, ಬಿಪಿಸಿಎಲ್, ಐಒಸಿಎಲ್,ಹೆಚ್ ಪಿಸಿಎಲ್,ಎಂಆರ್ ಪಿಎಲ್
ನೆಲಮಂಗಲ :
ಜ್ಯೋತಿಗ್ಯಾಸ್ ಪ್ರೈ ಲಿಮಿಟೆಡ್, ಇಂಡೋಗ್ಯಾಸ್, ಟೋಟಲ್ ಆಯಿಲ್ ಇಂಡಿಯಾ ಪ್ರೈ. ಲಿಮಿಟೆಡ್, ಏಜಿಸ್ ಗ್ಯಾಸ್ ಎಲ್ ಪಿಜಿ ಪ್ರೈವೇಟ್ ಲಿಮಿಟೆಡ್, ಸ್ನೇಹಾ ಪೆಟ್ರೋಲಿಯಂ ಪ್ರೈ. ಲಿಮಿಟೆಡ್, ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ (ರೋಲಿಂಗ್ ಮಿಲ್ ವಿಭಾಗ), ಜ್ಯೋತಿಗ್ಯಾಸ್ ಪ್ರೈ. ಲಿಮಿಟೆಡ್.
ಸಂಭವನೀಯ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಇಲಾಖೆಗೆ ಭದ್ರತೆ ಒದಗಿಸಲು ತಿಳಿಸಲಾಗಿದೆ. ಜೊತೆಗೆ, ಅಂತಹ ಚಟುವಟಿಕೆಗಳ ಮೇಲೆ ಕೆಲವು ನಿರ್ಬಂಧ ಹಾಕುವುದು ಅಗತ್ಯವಾಗಿದೆ.
ಜಿಲ್ಲಾ ಅಗ್ನಿಶಾಮಕದಳ ತುರ್ತು ಸಂದರ್ಭಗಳಲ್ಲಿ ಸಿದ್ಧರಿರಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ವಿಶೇಷವಾಗಿ ನಾಗರಿಕರಿಗೆ ಯಾವುದೇ ತೊಂದರೆ ಮತ್ತು ಅಪಘಾತಗಳನ್ನು ನಿರ್ವಹಿಸಲು ಸನ್ನದ್ಧವಾಗಿರಲು ಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ.
ನಕಲಿ ಸುದ್ದಿಗೆ ಕಡಿವಾಣ :
ಯಾವುದೇ ನಕಲಿ ಅಥವಾ ಸುಳ್ಳು ಸುದ್ದಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸರಣ, ಬಿತ್ತರವಾಗುವ ಸಂಗತಿಗಳನ್ನು ತಕ್ಷಣವೇ ನೈಜ ಸಂಗತಿಯೊಂದಿಗೆ ಪರಿಶೀಲಿಸಿ ಕ್ರಮಕೈಗೊಂಡು, ಇವುಗಳ ಮೂಲವನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಸಮುದಾಯಗಳ ಮುಖಂಡರು ಮತ್ತು ಇತರ ಪ್ರಮುಖ ನಾಗರಿಕರೊಂದಿಗೆ ವಾಟ್ಸ್ಆ್ಯಪ್ ಗ್ರೂಪ್ಗಳು ಸಕ್ರಿಯವಾಗಿರಬೇಕು. ಯಾವುದೇ ಸುಳ್ಳು, ವದಂತಿಗಳು ಕಂಡುಬಂದಾಗ ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಂಟ್ರೋಲ್ ರೂಂ. ಸಂಖ್ಯೆ: 080-28388005ಗೆ ಸಂಪರ್ಕಿಸಿ, ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.



