ಪ್ರೀತಿ ಇನ್ನೊಂದು ಮುಖ ದ್ವೇಷ ಅನ್ನೋ ಮಾತಿದೆ. ಆದರೆ ಅದು ಎಷ್ಟು ವಿಕೋಪಕ್ಕೆ ತಿರುಗುತ್ತದೆ ಅಂದರೆ ಜೀವ ಹಾನಿ ಆಗುವವರೆಗೂ ತಲುಪುತ್ತದೆ. ಆದರೆ ಪ್ರಿಯಕರ ಮತ್ತು ಪ್ರೇಮಿ ನಡುವೆ ಇರಬೇಕಿದ್ದ ಈ ಜಗಳ, ಮನಸ್ತಾಪ, ಸಿಟ್ಟು, ಕೋಪ, ದ್ವೇಷ ಇಡೀ ದೇಶವೇ ತತ್ತರಿಸುವಂತೆ ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಹೌದು, ಪ್ರೀತಿಸಿ ಮದುವೆ ಆಗಬೇಕಿದ್ದ ಹುಡುಗ ಬೇರೊಬ್ಬಳನ್ನು ಮದುವೆ ಆಗಿದ್ದರಿಂದ ಸೇಡು ತೀರಿಸಿಕೊಳ್ಳಲು ಮಹಿಳಾ ಟೆಕ್ಕಿ 12 ರಾಜ್ಯಗಳಲ್ಲಿ 21 ಹುಸಿಬಾಂಬ್ ಬೆದರಿಕೆ ಕರೆ ಮಾಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ತಾನು ಪ್ರೀತಿಸಿ ಮದುವೆ ಆಗಬೇಕಿದ್ದ ಹುಡುಗ ತನ್ನ ಪ್ರೀತಿಯನ್ನು ನಿರಾಕರಿಸಿ ಬೇರೋಬ್ಬಳನ್ನು ಮದುವೆ ಆಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ರೊಬೊಟಿಕ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 30 ವರ್ಷ ರೀನಾ ಜೋಶಿಡಾ ಪ್ರಿಯಕರನನ್ನು ಜೈಲಿಗೆ ಹಾಕಿಸಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಭರ್ಜರಿ ಪ್ಲಾನ್ ಮಾಡಿದ್ದಾಳೆ.
ತನ್ನ ಲೊಕೇಷನ್ ಗೌಪ್ಯವಾಗಿಡಲು ಡಾರ್ಕ್ ವೆಬ್, ಪರ್ಯಾಯ ನೆಟ್ ವರ್ಕ್ ಬಳಸಿಕೊಂಡು ನಕಲಿ ಇ-ಮೇಲ್ ಖಾತೆ ತೆರೆಯುವ ಮೂಲಕ ಗುಜರಾತ್, ಕರ್ನಾಟಕ, ದೆಹಲಿ ಸೇರಿದಂತೆ 12 ರಾಜ್ಯಗಳಲ್ಲಿ ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಮಾಡಿ ಪೊಲೀಸರ ನಿದ್ದೆಗೆಡಿಸಿದ್ದಳು.
ಕಳೆದ ಜೂನ್ ತಿಂಗಳಿನಿಂದ ಈ ರೀತಿ ಪದೇಪದೆ ಹುಸಿ ಬಾಂಬ್ ಕರೆ ಮಾಡುತ್ತಿದ್ದ ರೀನಾಳನ್ನು ಇದೀಗ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
2022ರಲ್ಲಿ ಚೆನ್ನೈನ ರೊಬೊಟಿಕ್ ಕಂಪನಿಯಲ್ಲಿ ಹಿರಿಯ ಕನ್ಸಲ್ಟೇನ್ಸಿಯಾಗಿ ಕೆಲಸ ಮಾಡುತ್ತಿದ್ದ ರೀನಾ, ದಿಲಿಜ್ ಪ್ರಭಾಕರ್ ಎಂಬ ವ್ಯಕ್ತಿಯನ್ನು ಇಷ್ಟಪಟ್ಟಿದ್ದು, ಮದುವೆ ಆಗಲು ಬಯಿಸಿದ್ದಳು. ಆದರೆ ಆತ ಈಕೆಯ ಪ್ರೀತಿಯನ್ನು ನಿರಾಕರಿಸಿ ಕಳೆದ ಫೆಬ್ರವರಿಯಲ್ಲಿ ಬೇರೊಬ್ಬ ಹುಡುಗಿಯನ್ನು ಮದುವೆ ಆಗಿದ್ದ.
ಪ್ರೀತಿಯಲ್ಲಿ ಕುರುಡಾಗಿದ್ದ ರೀನಾ ಪ್ರಭಾಕರ್ ಹೆಸರಲ್ಲಿ ನಕಲಿ ಮೇಲ್ ಐಡಿಗಳನ್ನು ತಯಾರಿಸಿದ್ದು ಅಲ್ಲದೇ ತನ್ನ ಬುದ್ದಿವಂತಿಕೆಯನ್ನು ಬಳಸಿ ತಾಂತ್ರಿಕವಾಗಿ ಪೊಲೀಸರಿಗೆ ಸಿಕ್ಕಿಬೀಳದಂತೆ ಹುಸಿಬಾಂಬ್ ಕರೆಗಳನ್ನು ಆಗಾಗ್ಗೆ ಮಾಡುತ್ತಿದ್ದಳು.
ಅಹಮದಾಬಾದ್ ಕ್ರೀಡಾಂಗಣ, ಆಸ್ಪತ್ರೆ, ಶಾಲೆಗಳು ಅಲ್ಲದೇ ಉಡುಪಿಯ ಶಾಲೆಗೂ ಈಕೆ ಬೆದರಿಕೆ ಸಂದೇಶ ಕಳುಹಿಸಿದ್ದಳು.
ಇ-ಮೇಲ್ ಸಂದೇಶ ಕಳುಹಿಸುತ್ತಿದ್ದ ವ್ಯಕ್ತಿಯ ಹಿಂದೆ ನಾವು ತುಂಬಾ ದಿನದಿಂದ ಬಿದ್ದಿದ್ದೆವು. ಆದರೆ ಆಕೆ ತುಂಬಾ ಜಾಣೆ ಆಗಿದ್ದರಿಂದ ಕೈಗೆ ಸಿಗುತ್ತಿರಲಿಲ್ಲ. 11 ಬೇರೆ ಬೇರೆ ಜಾಗದಿಂದ ಬೆದರಿಕೆ ಸಂದೇಶ ಕಳುಹಿಸಿದ್ದಳು. ಆದರೆ ನಾವು ತಾಳ್ಮೆಯಿಂದ ಆಕೆಯ ಚಲನವಲನಗಳ ಮೇಲೆ ನಿಗಾ ವಹಿಸಿದ್ದೆವು. ಒಂದು ಸಣ್ಣ ತಪ್ಪಿನಿಂದ ಆಕೆ ಕೊನೆಗೂ ಸಿಕ್ಕಿಬಿದ್ದಳು ಎಂದು ಅಹಮದಾಬಾದ್ ಪೊಲೀಸ್ ಆಯುಕ್ತರು ತಿಳಿಸಿದರು.



