ಗೃಹರಕ್ಷಕ ದಳ (ಹೋಂಗಾರ್ಡ್)ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಪತಿ ಮಕ್ಕಳ ಎದುರೇ 10 ಬಾರಿ ಇರಿದು ಕೊಂದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆನ್‌ಲೈನ್ ಬೆಟ್ಟಿಂಗ್ ಚಟ ಅಂಟಿಸಿಕೊಂಡು ನಷ್ಟ ಉಂಟಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಪತಿ ಪ್ರದೀಪ್ 32 ವರ್ಷದ ಪತ್ನಿ ಮಂಜುಳಾ ಅವರನ್ನು ಹತ್ಯೆಗೈದಿದ್ದಾರೆ.
ಮಹದೇವಪುರದ ಉದಯನಗರದಲ್ಲಿ ಭಾನುವಾರ ರಾತ್ರಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಪ್ರದೀಪ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
15 ವರ್ಷಗಳ ಹಿಂದೆ ಪ್ರದೀಪ್ ಮತ್ತು ಮಂಜುಳಾ ಮದುವೆಯಾಗಿತ್ತು. ಆದರೆ ಪ್ರದೀಪ್ ಇತ್ತೀಚೆಗೆ ಆನ್‌ಲೈನ್ ಆ್ಯಪ್‌ಗಳಲ್ಲಿ ಬೆಟ್ಟಿಂಗ್ ಗೀಳಿಗೆ ಸಿಲುಕಿದ್ದ. ಅದೇ ಕಾರಣಕ್ಕೆ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿತ್ತು. ಸಾಲದ್ದಕ್ಕೆ ಪತ್ನಿ ಮೇಲೆಯೂ ಪ್ರದೀಪ್ ಸದಾ ಅನುಮಾನಪಡುತ್ತಿದ್ದ ಎನ್ನಲಾಗಿದೆ.
ನಟಿಸಿ ಪತ್ನಿಯ ಕೊಲೆ:
ಪತಿಯ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೆ ಮಂಜುಳಾ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಕಳೆದ ಒಂದು ತಿಂಗಳಿನಿಂದ ಉದಯನಗರದ ಪುಷ್ಪಾಂಜಲಿ ಥಿಯೇಟರ್ ಬಳಿಯ ಮನೆಯಲ್ಲಿ ವಾಸವಿದ್ದರು.
ರಾತ್ರಿ 9 ಗಂಟೆ ಸುಮಾರಿಗೆ ಮಂಜುಳಾ ಇದ್ದ ಮನೆಗೆ ಬಂದಿದ್ದ ಪ್ರದೀಪ್, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುವವನಂತೆ ನಟಿಸಿದ್ದಾನೆ. ಕೊನೆಯದಾಗಿ ಕಾಲು ಹಿಡಿಯುತ್ತೇನೆ, ತಪ್ಪಾಯಿತು ಮನೆಗೆ ಬಾ ಎಂದು ಕಾಲಿಗೆ ಬಿದ್ದವನೇ, ಜರ್ಕಿನ್ ಒಳಗಡೆ ಬಚ್ಚಿಟ್ಟುಕೊಂಡು ತಂದಿದ್ದ ಚಾಕುವಿನಿಂದ ಮಂಜುಳಾ ಅವರ ಮೇಲೆ ಮುಗಿಬಿದ್ದಿದ್ದಾನೆ. ಇಬ್ಬರು ಮಕ್ಕಳ ಎದುರೇ ಮಂಜುಳಾ ಅವರಿಗೆ 10ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕೊಲೆಗೂ ಮುನ್ನ ವಿಡಿಯೋ:
ಕೊಲೆಗೂ ಮುನ್ನ ಆರೋಪಿ ಪ್ರದೀಪ್ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ. “ಬೆಟ್ಟಿಂಗ್ ಚಟದಿಂದ ನನ್ನ ಹೆಂಡತಿ, ಮಕ್ಕಳು ಬೀದಿಗೆ ಬಂದರು. ಅತ್ತೆ ಹಾಗೂ ನಾದಿನಿಯಿಂದ ನನ್ನ ಪತ್ನಿ ಹಾಳಾದಳು. ನಾನೂ ಸಾಯುತ್ತೇನೆ, ನನ್ನ ಹೆಂಡತಿಯೂ ಸಾಯುತ್ತಾಳೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದ.
ಆತ್ಮಹತ್ಯೆ ಯತ್ನ
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪ್ರದೀಪ್ ತಾನು ಕೂಡ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಮಹಾದೇವಪುರ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.



