ಮೈಸೂರು: ಹುಣಸೂರು ದರೋಡೆ ಪ್ರಕರಣದಲ್ಲಿ ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಇಬ್ಬರು ದರೋಡೆಕೋರರನ್ನು ಬಂಧಿಸಲಾಗಿದೆ.
ಡಿಸೆಂಬರ್ 28ರಂದು ಹುಣಸೂರಿನ ಜ್ಯೂವೆಲರಿ ಅಂಗಡಿಗೆ ನುಗ್ಗಿದ 5 ಮಂದಿ ಮುಸುಕುಧಾರಿಗಳು 8 ಕೆಜಿ ತೂಕದ 10 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣದಲ್ಲಿ ದೆಹಲಿ ಜೇತ್ ಪುರ್ ಜಿಲ್ಲೆಯ ಹರಿನಗರ ಬಡಾವಣೆಯ ರಿಷಿಕೇಶ್ ಕುಮಾರ್ ಸಿಂಗ್( ವಿಜಯಕುಮಾರ್ ಸಿಂಗ್) ಹಾಗೂ ಬಿಹಾರದ ಬಾಗಲ್ ಪುರ ಜಿಲ್ಲೆಯ ಪಂಕಜ್ ಕುಮಾರ್( ರಾಮನಾಥ್ ಪ್ರಸಾದ್ ಸಿಂಗ್) ವಶಕ್ಕೆ ಪಡೆಯಲಾಗಿದೆ.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಗಳು ಮೊಬೈಲ್ ಬಳಸದ ಕಾರಣ ಪ್ರಕರಣ ಭೇದಿಸಲು ತಡವಾಯಿತು. ಆದರೆ ಸ್ಥಳೀಯ ಪೊಲೀಸರ ಸಹಾಯದಿಂದ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದರು.
ಪಂಕಜ್ ಕುಮಾರ್ ಡಕಾಯಿತಿಗೆ ಸ್ಕೇಚ್ ಹಾಕಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ. ಬಂದಿತರಿಂದ 92 ಸಾವಿರ 12.5 ಗ್ರಾಂ ಚಿನ್ನ, ಒಂದು ಬುಲೆಟ್ ಬೈಕ್ ವಶ ಪಡಿಸಿಕೊಂಡಿದ್ದೇವೆ. 8 ಕೆಜಿಕ್ಕಿಂತಲೂ ಹೆಚ್ಚು ಚಿನ್ನಾಭರಣ ದೋಚಲಾಗಿದ್ದು, 10 ಮಂದಿ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ ಎಂದು ಅವರು ಹೇಳಿದರು
ವಿಡಿಯೋದಲ್ಲಿನ ಮುಖ ಚಹರೆ ಹಾಗೂ ಇವರ ಮೇಲಿನ ಹಳೆಯ ಪ್ರಕರಣಗಳಿಂದ ಇವರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಪಂಕಜ್ ಸಿಂಗ್ 27 ಕೊಲೆ, ಕಳವು ಪ್ರಕರಣಗಳಲ್ಲಿ ಭಾಗಯಾಗಿದ್ದರೆ, ಚೋಟು ಸಿಂಗ್ 4 ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇವರೂ ಕಳ್ಳತನವನ್ನೇ ಗುರಿಯಾಗಿಸಿಕೊಂಡಿದ್ದು, ಕಳವಿಗೆ ಸೂಕ್ತ ಜಾಗ ನೋಡಿ ನಂತರ ಯೋಜನೆ ರೂಪಿಸುತ್ತಾರೆ ಎಂದು ಅವರು ವಿವರಿಸಿದರು.
ದರೋಡೆಗೂ ಮುನ್ನ ಹಾಸನ, ತುಮಕೂರು, ಕೊಡಗಿನಲ್ಲಿಯೂ ಹೊಂಚು ಹಾಕಿದ್ದರು. ಅಂತಿಮವಾಗಿ ಹುಣಸೂರು ಅಂಗಡಿ ಆಯ್ಕೆ ಮಾಡಿಕೊಂಡರು. ಯಾವ ಕಾರಣಕ್ಕೆ ಆ ಅಂಗಡಿ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ವಿಚಾರಣೆ ನಡೆದಿದೆ.
ಘಟನೆಗೂ ಮುನ್ನ ಮೂರು ನಾಲ್ಕು ದಿನಗಳಿಂದ ಸ್ಥಳೀಯ ಲಾಡ್ಜ್ ಗಳಲ್ಲಿ ಸುಳ್ಳು ಆಧಾರ್, ಮೊಬೈಲ್ ನಂಬರ್ ನೀಡಿ ವಾಸ್ತವ್ಯ ಹೂಡಿದ್ದರು. ಇವರ ಸೆರೆಹಿಡಿಯಲು 50 ಮಂದಿಯ ಪೊಲೀಸರ ತಂಡ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಆರೋಪಿಗಳು ಹಲವು ದರೋಡೆ ಪ್ರಕರಣ ನಡೆಸಿದ್ದರೂ ಸಿಕ್ಕಿಬಿದ್ದಿರಲಿಲ್ಲ. ಆದರೆ ಕರ್ನಾಟಕದಲ್ಲಿ ಮೊದಲ ಬಾರಿ ದರೋಡೆ ಮಾಡಿದಾಗಲೇ ಸಿಕ್ಕಿಬಿದ್ದಿದ್ದಾರೆ. ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಐಜಿಪಿ ಬೋರಲಿಂಗಯ್ಯ ಮಾರ್ಗದರ್ಶನ ಹಾಗೂ ಹಿಂದಿನ ಎಸ್ಪಿ ವಿಷ್ಣು ವರ್ಧನ್ ಕಾರ್ಯಾಚರಣೆಗೆ ಇಳಿದು ಐದು ತಂಡವಾಗಿ ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಅಂದಿನಿಂದಲೂ ಅಡಿಷನಲ್ ಎಸ್ಪಿ ನಾಗೇಶ್ ನೇತೃತ್ವದಲ್ಲಿ ಐದು ತಂಡ ತನಿಖೆ ಕೈಗೊಂಡಿದ್ದರು.
ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಪರ ಪೊಲೀಸ್ ಅಧೀಕ್ಷಕ ಎಲ್. ನಾಗೇಶ್, ಸಿ. ಮಲ್ಲಿಕ್, ಹುಣಸೂರು ಉಪವಿಭಾಗದ ಡಿವೈಎಸ್ ಪಿ ರವಿ ಡಿವೈಎಸ್‌ಪಿ, ಸೈಬರ್ ಠಾಣೆ ಡಿಎಸ್ ಪಿ ಶ್ರೀಕಾಂತ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಆರ್. ಸಂತೋಷ್ ಕಶ್ಯಪ್, ದೀಪಕ್, ಪುನೀತ್ ಪ್ರಸನ್ನಕುಮಾರ್, ಗಂಗಾಧರ್, ಎಸ್.ಪಿ.ಸುನೀಲ್, ಪಿ.ಎಸ್.ಐ.ಗಳಾದ ಅಜಯ್ ಕುಮಾರ್,ಜಗದೀಶ, ರವಿ ಕುಮಾರ್, ಚಂದ್ರಹಾಸ ನಾಯಕ, ಸಿಬ್ಬಂದಿಗಳಾದ ಎಚ್.ಎನ್.ಅರುಣ ಹೆಚ್.ಎನ್, ಆರ್. ಪ್ರಭಾಕರ, ಶ್ರೀನಿವಾಸ್ ಪ್ರಸಾದ್, ಡಿ. ಎ. ಇರ್ಫಾನ್, ವಿಜಯ್ ಪವಾರ್, ಸತೀಶ್, ಪುನೀತ್, ಚಂದು, ಮಹೇಂದ್ರ ಸಂಜಯ್ ಹಾಗೂ ಜಿಲ್ಲಾ ಬೆಕ್ನಿಕಲ್ ವಿಭಾಗದ ಎ.ಎಸ್.ಐ ವಸಂತ್ ಕುಮಾರ್, ಲೋಕೇಶ್, ಪೀರ್ ಖಾನ್, ಸುನಿತಾ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.



