Tuesday, May 26, 2026
Google search engine
Homeಅಪರಾಧಕೀಳುಮಟ್ಟದ ಸಂದೇಶ ಕಳುಹಿಸಿದ 43 ಮಂದಿ ವಿರುದ್ಧ ದೂರು ನೀಡಿದ್ದೇನೆ: ನಟಿ ರಮ್ಯಾ

ಕೀಳುಮಟ್ಟದ ಸಂದೇಶ ಕಳುಹಿಸಿದ 43 ಮಂದಿ ವಿರುದ್ಧ ದೂರು ನೀಡಿದ್ದೇನೆ: ನಟಿ ರಮ್ಯಾ

ನನಗೆ ಕೀಳುಮಟ್ಟದ ಸಂದೇಶ ಕಳುಹಿಸಿದ 43 ಮಂದಿಯ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ನಟಿ ರಮ್ಯಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಅಭಿಮಾನಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸೆಲೆಬ್ರೆಟಿಯಾಗಿರುವ ನನ್ನ ವಿರುದ್ಧವೇ ಇಷ್ಟು ಕೀಳುಮಟ್ಟದ ಸಂದೇಶ ಕಳುಹಿಸಿದ್ದಾರೆ ಅಂದರೆ ಸಾಮಾನ್ಯ ಮಹಿಳೆಯರ ಪಾಡೇನು? ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಗೂ ನಿಮಗೂ ಏನು ವ್ಯಾತ್ಯಾಸ ಎಂದು ಅವರು ಪ್ರಶ್ನಿಸಿದರು.

ಕೆಲವು ದಿನಗಳ ಹಿಂದೆ ದರ್ಶನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಪೋಸ್ಟ್ ಮಾಡಿದ್ದೆ. ಅದಕ್ಕೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿಂದೆಯೂ ಸಾಕಷ್ಟು ಜನರು ಕೆಲವು ವಿಷಯಗಳಿಗೆ ಟ್ರೋಲ್ ಮಾಡಿದ್ದರು. ಆದರೆ ಇಷ್ಟು ಕೀಳುಮಟ್ಟದ ಪೋಸ್ಟ್ ಗಳ ಮೂಲಕ ಟ್ರೋಲ್ ಯಾರೂ ಮಾಡಿರಲಿಲ್ಲ. ನನ್ನ ಜೀವಮಾನದಲ್ಲೇ ಇಷ್ಟು ಕೀಳುಮಟ್ಟದ ಭಾಷೆ ಕೇಳಿರಲಿಲ್ಲ. ಕೆಲವು ಶಬ್ಧಗಳಿಗೆ ನನಗೆ ಅರ್ಥವೇ ಗೊತ್ತಿಲ್ಲ ಎಂದು ಅವರು ನುಡಿದರು.

ನನಗೆ ಸಾಕಷ್ಟು ಮಂದಿ ಕೆಟ್ಟ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ಅತ್ಯಂತ ಕೆಟ್ಟ ಸಂದೇಶ ಕಳುಹಿಸಿದ 43 ಮಂದಿಯ ಪಟ್ಟಿ ಮಾಡಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರನ್ನು ನಾನು ಸಂಪರ್ಕಿಸದೇ ಇದ್ದರೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ರಮ್ಯಾ ಹೇಳಿದರು.

ಸಹ ನಟಿ ರಕ್ಷಿತಾ ಹಾಗೂ ವಿಜಯಲಕ್ಷ್ಮೀ ಪೋಸ್ಟ್ ಗಳು ನನ್ನ ವಿರುದ್ಧ ಅಂತ ನನಗೆ ಅನಿಸಿಲ್ಲ. ಅವರು ಬೇರೆಯವರಿಗೆ ಅಥವಾ ಅಭಿಮಾನಿಗಳಿಗೆ ಹೇಳಿರಬಹುದು. ನಾನು ಧ್ವನಿ ಎತ್ತಿರುವುದಕ್ಕೆ ಸಿನಿಮಾ ರಂಗದ ಸಾಕಷ್ಟು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವರು ಬಹಿರಂಗವಾಗಿ ಹೇಳಿಕೆ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments