Wednesday, June 24, 2026
Google search engine
Homeರಾಜ್ಯಕೊಪ್ಪಳದಲ್ಲಿ 85 ರೆಸಾರ್ಟ್, 47 ಹೋಂಸ್ಟೇಗಳಿಗೆ ಬೀಗ, 2 ರೆಸಾರ್ಟ್ ನೆಲಸಮ!

ಕೊಪ್ಪಳದಲ್ಲಿ 85 ರೆಸಾರ್ಟ್, 47 ಹೋಂಸ್ಟೇಗಳಿಗೆ ಬೀಗ, 2 ರೆಸಾರ್ಟ್ ನೆಲಸಮ!

ಕೊಪ್ಪಳ: ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ನೂರಾರು ರೆಸಾರ್ಟ್ ಹಾಗೂ ಹೋಂಸ್ಟೇಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು 85 ರೆಸಾರ್ಟ್ ಮತ್ತು 47 ಹೋಂಸ್ಟೇಗಳಿಗೆ ಬೀಗ ಜಡಿದು ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿದರೆ 2 ರೆಸಾರ್ಟ್ ಗಳನ್ನು ನೆಲಸಮ ಮಾಡಲಾಗಿದೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಮತ್ತು ಆನೆಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅನಧಿಕೃತವಾಗಿ ವಹಿವಾಟು ನಡೆಸುತ್ತಿದ್ದ ರೇಸಾರ್ಟ್ ‌ಗಳ ಮೇಲೆ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದ ತಂಡಗಳು ಗುರುವಾರ ಬೆಳಿಗ್ಗೆ ಏಕಕಾಲದಲ್ಲಿ ದಾಳಿ ಮಾಡಿತು.

ಜಿಲ್ಲಾಡಳಿತ ಫೆಬ್ರವರಿ 2 ಮತ್ತು 24ರಂದು ನಡೆಸಿದ ಸಭೆಯಲ್ಲಿ ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಮತ್ತು ಹಿಟ್ನಾಳ ಗ್ರಾಮ ಪಂಚಾಯತಿ, ಗಂಗಾವತಿ ತಾಲೂಕಿನ ಸಾಣಾಪುರ, ಆನೆಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ರೇಸಾರ್ಟ್, ಹೋಂ ಸ್ಟೇಗಳನ್ನು ಕಾನೂನು ಅನುಸಾರ ತೆರವಿಗೆ ನಿರ್ಧರಿಸಿ, ಸಂಬಂಧಿಸಿದ ರೇಸಾರ್ಟ್ ಮಾಲಕರಿಗೆ ನೋಟೀಸ್ ನೀಡಲಾಗಿತ್ತು.

ನೋಟಿಸ್ ಜಾರಿ ಮಾಡಿದ ಹೊರತಾಗಿಯೂ ಅಕ್ರಮವಾಗಿ ಎಗ್ಗಿಲ್ಲದೆ ನಡೆಯುತ್ತಿದ್ದ ರೆಸಾರ್ಟ್ ಗಳಲ್ಲಿ ಅಕ್ರಮ ಚಟುವಟಿಕೆ ಹಾಗೂ ವಿದೇಶೀಯರಿಗಾಗಿ ಪಾರ್ಟಿಗಳನ್ನು ಆಯೋಜಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಅಕ್ರಮವಾಗಿ ನಡೆಸುತ್ತಿದ್ದ ರೆಸಾರ್ಟ್ ಹಾಗೂ ಹೋಂ ಸ್ಟೇಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಮೊದಲ ಹಂತವಾಗಿ ವಿದ್ಯುತ್ ಕಡಿತಗೊಳಿಸುವ ಮೂಲಕ ಗುರುವಾರ ಜೆಸ್ಕಾಂ ಶಾಕ್ ನೀಡಿದೆ. ಜೊತೆಗೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದ ಎರಡು ರೇಸಾರ್ಟ್‌ಗಳನ್ನು ಡೆಮಾಲಿಷ್ ಮಾಡಲಾಗಿದೆ.

ಫೆಬ್ರವರಿ 25 ರಂದು ತೆರವು ಕಾರ್ಯಾಚರಣೆ ಆರಂಭಗೊಳಿಸಿರುವ ಜಿಲ್ಲಾಡಳಿತವು ಮೊದಲ ಹಂತವಾಗಿ ಅನಧಿಕೃತ ರೇಸಾರ್ಟ್‌ಗಳ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಮೂಲಕ ಕಡಿತಗೊಳಿಸಿದೆ.

ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ, ನಾರಾಯಣಪೇಟೆ ಮತ್ತು ರಾಜಾರಾಮಪೇಟೆ ಗ್ರಾಮಗಳಲ್ಲಿ ಹಾಗೂ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಮತ್ತು ಅಯೋಧ್ಯ ಗ್ರಾಮಗಳಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಸುಮಾರು 35ಕ್ಕೂ ಅಧಿಕ ರೆಸಾರ್ಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಗಂಗಾವತಿ ತಾಲೂಕಿನ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 50 ರೇಸಾರ್ಟ್ ಹಾಗೂ 47 ಹೋಂ ಸ್ಟೇಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಗ್ರಾಮ ಪಂಚಾಯತಿಯಿಂದ ನೀಡಿರುವ ಪರವಾನಗಿಯನ್ನು ಮತ್ತು ವಿದ್ಯುತ್ ಸಂಪರ್ಕಕ್ಕಾಗಿ ಜೆಸ್ಕಾಂ ಇಲಾಖೆಯವರಿಗೆ ನೀಡಿರುವ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆದು, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಜೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ರೆಸಾರ್ಟ್ ಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ, ರೆಸಾರ್ಟ್‌ಗಳನ್ನು ಮುಚ್ಚಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments