ಟೆಹರ್ರಾನ್: ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಪರ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾದ ಮೂವರನ್ನು ಇರಾನ್ ಗಲ್ಲಿಗೇರಿಸಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ 12 ದಿನಗಳ ಭೀಕರ ಯುದ್ಧದ ನಂತರ ಅಮೆರಿಕದ ಸಲಹೆ ಮೇರೆಗೆ ಎರಡೂ ದೇಶಗಳು ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಕದನ ವಿರಾಮದ ಬೆನ್ನಲ್ಲೇ ಗುಪ್ತಚಾರಿಕೆ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದಾರೆ ಎನ್ನಲಾದ ಮೂವರು ಇಸ್ರೇಲ್ ಗುಪ್ತಚರರನ್ನು ಇರಾನ್ ಗಲ್ಲಿಗೇರಿಸಿದೆ. ಆದರೆ ಗಲ್ಲಿಗೇರಿಸಿದವರ ವಿವರ ಹಾಗೂ ಮಾಹಿತಿಗಳನ್ನು ಇರಾನ್ ಬಹಿರಂಗಪಡಿಸಿಲ್ಲ.
ಯುದ್ಧ ಸೇರಿದಂತೆ ನಾನಾ ಕಾರಣಗಳಿಗೆ ಇಸ್ರೇಲ್ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾದ 700 ಮಂದಿಯನ್ನು ಇರಾನ್ ಬಂಧಿಸಿದೆ.
ಇಸ್ರೇಲ್ ಮತ್ತು ಇರಾನ್ ನಡುವಣ ಹಲವು ದಶಕಗಳ ವೈಷಮ್ಯವಿದ್ದು, ಈ ಬಾರಿ ಅದು ತಾರಕಕ್ಕೇರಿ ಯುದ್ಧಕ್ಕೆ ಕಾರಣವಾಗಿತ್ತು. ಅಣು ಸ್ಥಾವರ ಹೊಂದಿದೆ ಎಂಬ ಕಾರಣಕ್ಕೆ ಮಧ್ಯಪ್ರವೇಶಿಸಿದ ಅಮೆರಿಕ, ಇರಾನ್ ನಲ್ಲಿರುವ ಮೂರು ಅಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್, ಕತಾರ್ ಮತ್ತು ಇರಾನ್ ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.



