ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯಲ್ಲಿ ಇರಾನ್ ಸರ್ವೊಚ್ಚ ನಾಯಕ ಅಯತೊಲ್ಲಾ ಅಲ್ ಖಮೇನಿ ಹಾಗೂ ಅವರ ಕುಟುಂಬದ ಹಲವು ಸದಸ್ಯರು ಹತ್ಯೆಯಾಗಿದ್ದಾರೆ.
ಶನಿವಾರ ಬೆಳಿಗ್ಗೆ ಅಮೆರಿಕ ಮತ್ತು ಇಸ್ರೇಲ್ ಇರಾನ್ ಸರ್ವೊಚ್ಚ ನಾಯಕ ಖಮೇನಿ ಅವರ ನಿವಾಸದ ಮೇಲೆ ಸುಮಾರು ೩೦ ಬಾಂಬ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಖಮೇನಿ, ಸೊಸೆ, ಅಳಿಯ ಸೇರಿದಂತೆ ಹಲವಾರು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಇರಾನ್ ನಲ್ಲಿ ೪೦ ದಿನ ಶೋಕಾಚರಣೆ ಘೋಷಿಸಲಾಗಿದೆ. ಖಮೇನಿ ಹತ್ಯೆ ನಂತರವೂ ಇರಾನ್ ಅಮೆರಿಕದ ದುಬೈ, ದೋಹಾ ರಾಜಧಾನಿ ಕತಾರ್ ವಾಯುನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಅಮೆರಿಕದ ಜೊತೆ ಕೈ ಜೋಡಿಸಿರುವ ದುಬೈ ಹಾಗೂ ಕತಾರ್ ವಿರುದ್ಧ ಇರಾನ್ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ಕಡೆ ನಾಗರಿಕ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ವಿಶ್ವದ ಅತ್ಯಂತ ಜನದಟ್ಟಣೆಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲದೇ ಖ್ಯಾತ ಬುರ್ಜ್ ಖಾಲಿಫಾ ಕಟ್ಟಡದ ಸಮೀಪದಲ್ಲೂ ಬಾಂಬ್ ಬಿದ್ದಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಇರಾನ್ ಮೇಲೆ ದಾಳಿ ಮತ್ತಷ್ಟು ತೀವ್ರ
ಖಮೇನಿ ಹತ್ಯೆ ನಂತರವೂ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ಮುಂದುವರಿಸಿದ್ದು, ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದೆ. ಸತತ ಎರಡನೇ ದಿನವೂ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ.
ಖೇಮನಿ ಹತ್ಯೆಗೆ ಸೇಡು
1989ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ ಯಾತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಘೋಷಿಸಿದೆ.
ಯುಎಸ್ ಮತ್ತು ಇಸ್ರೇಲ್ ವಿರುದ್ಧ “ಇತಿಹಾಸದಲ್ಲಿ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆ” ನಡೆಸುತ್ತೇವೆ. ಇರಾನ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಘೋಷಿಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ, ಜಾಗತಿಕ ಭದ್ರತೆಗೆ “ಗಂಭೀರ ಪರಿಣಾಮಗಳ” ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಯುರೋಪಿಯನ್ ಒಕ್ಕೂಟ ಮತ್ತು ರಷ್ಯಾ ಕೂಡ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿವೆ.



