ಬೆಂಗಳೂರು:ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಹೋದ ಶಿಕ್ಷಕಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಮನೆಯ ಕಾಂಪೌಂಡ್ನಲ್ಲಿ ಕೂಡಿ ಹಾಕಿದ್ದ ಆರೋಪಿಯನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ಧಾರೆ.
ಕೊಡಿಗೆಹಳ್ಳಿಯ ಸಂದೀಪ್ (30) ಬಂಧಿತ ಆರೋಪಿಯಾಗಿದ್ದಾನೆ,ಶಿಕ್ಷಕಿ ಸುಶೀಲಮ್ಮ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಡಿ ಆರೋಪಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದ ಕರ್ತವ್ಯಕ್ಕಾಗಿ ಸುಶೀಲಮ್ಮ ಅವರನ್ನು ನಿಯೋಜಿಸಲಾಗಿತ್ತು. ಇದರಂತೆ ಮನೆ – ಮನೆ ಗಣತಿ ಕಾರ್ಯ ಮಾಡುತ್ತಿದ್ದರು. ಬುಧವಾರ ಸಂಜೆ ಕೋತಿ ಹೊಸಹಳ್ಳಿ ಬಳಿ ಗಣತಿಗಾಗಿ ಆರೋಪಿಯ ಮನೆಗೆ ತೆರಳಿದ್ದರು.
ಜಾತಿ ಸಮೀಕ್ಷೆಗೆ ಬಂದಿದ್ದು, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲಾತಿ ನೀಡುವಂತೆ ಮನೆಯಲ್ಲಿದ್ದ ಆರೋಪಿಯ ತಾಯಿಗೆ ಕೇಳಿದ್ದರು. ಇದರಂತೆ ಮಾಹಿತಿ ಪಡೆದು ಆನ್ಲೈನ್ ಮುಖಾಂತರ ಒಟಿಪಿ ಸಂಖ್ಯೆ ಪಡೆದುಕೊಂಡಿದ್ದರು. ಈ ವೇಳೆ, ಮನೆಗೆ ಬಂದ ಸಂದೀಪ್ ಶಿಕ್ಷಕಿ ಜೊತೆ ರಾದ್ದಾಂತ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೇಟ್ಗೆ ಬೀಗ ಹಾಕಿ ಕೂಡಿ ಹಾಕಿದ
ಜಾತಿ ಗಣತಿ ಕಾರ್ಯಕ್ಕಾಗಿ ಬಂದಿರುವುದಾಗಿ ಶಿಕ್ಷಕಿ ಪರಿಚಯಿಸಿಕೊಂಡು ಗುರುತಿನ ಚೀಟಿ ತೋರಿಸಿದರೂ ಇದನ್ನು ನಂಬದ ಆರೋಪಿ ನೀವು ಯಾವ ಕಂಪನಿಯವರು? ನನ್ನ ತಾಯಿಯಿಂದ ಯಾಕೆ ಓಟಿಪಿ ಪಡೆದುಕೊಂಡಿದ್ದೀರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾನೆ. ಅಲ್ಲದೇ, ಶಿಕ್ಷಕಿ ಬಳಿಯಿದ್ದ ಗುರುತಿನ ಚೀಟಿ ಕಸಿದುಕೊಂಡಿದ್ದಾನೆ.
ಗಣತಿಗಾಗಿ ಬಂದಿರುವುದಾಗಿ ಹಲವು ತಿಳಿಸಿದರೂ ನಂಬದ ಆರೋಪಿ ಮನೆ ಆವರಣದ ಗೇಟ್ಗೆ ಬೀಗ ಹಾಕಿ ಕೂಡಿ ಹಾಕಿದ್ದಾನೆ. ಕೂಡಲೇ ನಿಮ್ಮ ಕಂಪನಿಯವರನ್ನು ಕರೆಯಿಸುವಂತೆ ತಾಕೀತು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದು ಮೇಲಧಿಕಾರಿಗಳು ತಿಳಿ ಹೇಳಿದರೂ ಆರೋಪಿಯು ತನ್ನ ವಾಗ್ವಾದ ಮುಂದುವರೆಸಿದ್ದ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 112ಗೆ ಕರೆ ಮಾಡಿ ಸುಶೀಲಮ್ಮ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕೂಡಿಹಾಕಿದ್ದ ಮಹಿಳೆಯನ್ನು ಬಿಡಿಸಿಕೊಂಡು ಆಕೆಯಿಂದ ದೂರು ಪಡೆದು ಆರೋಪಿಯನ್ನು ಬಂಧಿಸಿದ್ಧಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್ ಜಾತಿ ಗಣತಿಗಾಗಿ ಮನೆಗೆ ತೆರಳಿದಾಗ ಆರೋಪಿಯು ಶಿಕ್ಷಕಿಯ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಆಕೆಯನ್ನು ಕೂಡಿ ಹಾಕಿದ.
ಘಟನೆ ಸಂಬಂಧ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ತಾಯಿ ಹಾಗೂ ಮಗ ಇಬ್ಬರು ವಾಸವಾಗಿದ್ದಾರೆ. ಆರೋಪಿ ಗೊರಗುಂಟೆಪಾಳ್ಯ ಬಳಿ ಟೀ ಶಾಪ್ ಇಟ್ಟುಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದ್ಧಾರೆ.



