ನವದೆಹಲಿ: ಬಿಎಸ್ಸೆನ್ನೆಲ್ ನಿರ್ದೇಶಕ ವಿವೇಕ್ ಬನ್ಸಾಲ್ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಭೇಟಿ ನೀಡುವ ವೇಳೆ ಕಾಚ, ಬನಿಯನ್, ಚಪ್ಪಲಿ, ತಲೆಗೆ ಎಣ್ಣೆ, ಟವೆಲ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸರ್ಕಾರಿ ಅಧಿಕಾರಿಗಳಿಗೆ ಒಳ ಉಡುಪುಗಳು ಸೇರಿದಂತೆ ಬಾಚಣಿಕೆ, ಟವಲ್ ಮುಂತಾದ ಅಗತ್ಯ ವಸ್ತುಗಳ ಪೂರೈಕೆಯ ಜವಾಬ್ದಾರಿ ವಹಿಸಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತನಿಖೆಗೆ ಆದೇಶಿಸಿದ್ದಾರೆ.
ಬಿಎಸ್ಸೆನ್ನೆಲ್ ನಿರ್ದೇಶಕ ವಿವೇಕ್ ಬನ್ಸಾಲ್ ಅವರ ಈ ವರ್ತನೆ ಆಘಾತಕಾರಿ ಆಗಿದ್ದು, ಅಸಭ್ಯ ಹಾಗೂ ಯಾವುದೇ ಕಾರಣಕ್ಕೂ ಸ್ವೀಕಾರಕ್ಕೆ ಅರ್ಹವಲ್ಲ ಎಂದು ಅವರು ಹೇಳಿದರು.
ಬಿಎಸ್‌ಎನ್‌ಎಲ್ ಮಂಡಳಿಯ ನಿರ್ದೇಶಕ (ಸಿಎಫ್‌ಎ) ಬನ್ಜಾಲ್ ಫೆಬ್ರವರಿ 25ರಿಂದ ಎರಡು ದಿನಗಳ ಕಾಲ ಪ್ರಯಾಗ್‌ರಾಜ್‌ಗೆ ಭೇಟಿ ನೀಡಬೇಕಿತ್ತು. ಪ್ರವಾಸದ ವೇಳೆ ಬಂಜಾಲ್ ಸಂಗಮದಲ್ಲಿ ಸ್ನಾನ, ದೋಣಿ ವಿಹಾರ, ಮತ್ತು ಬಡೇ ಹನುಮಾನ್ ಮಂದಿರ, ಅಕ್ಷಯವತ್ ಮತ್ತು ಪಾತಾಳಪುರಿ ದೇವಾಲಯಗಳಿಗೆ ಭೇಟಿ ನಿಗದಿಯಾಗಿತ್ತು. ವಿವಾದ ಸರ್ಕಾರವನ್ನು ಮುಟ್ಟುತ್ತಿದ್ದಂತೆ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಬನ್ಸಾಲ್ ಪ್ರಯಾಗ್ ರಾಜ್ ಭೇಟಿ ನೀಡಿ ಸುಮಾರು 50 ಅಧಿಕಾರಿಗಳಿಗೆ 20 ರೀತಿಯ ಜವಾಬ್ದಾರಿ ವಹಿಸಿದ್ದರು. ಇದರಲ್ಲಿ ಚಡ್ಡಿ, ಚಪ್ಪಲಿ, ಟವಲ್, ಕನ್ನಡಿ, ಬಾಚಣಿಕೆ, ತಲೆಗೆ ಎಣ್ಣೆ ಸೇರಿದ ‘ಸ್ನಾನ್’ ಕಿಟ್ ಸಿದ್ಧಪಡಿಸಬೇಕು. ಅಲ್ಲದೇ ಘಾಟ್‌ನಲ್ಲಿ ಸಾಮಾನ್ಯ ಬಳಕೆಗಾಗಿ ಒಂದು ಬೆಡ್‌ಶೀಟ್ ಅನ್ನು ಜೋಡಿಸಲು ಸೂಚನೆಯನ್ನು ಸಹ ನೀಡಲಾಯಿತು.
ಹೋಟೆಲ್ ಮತ್ತು ಸರ್ಕ್ಯೂಟ್ ಹೌಸ್‌ನಲ್ಲಿ, ಆದೇಶದ ಪ್ರಕಾರ, ಡ್ರೈ ಫ್ರೂಟ್ ಬೌಲ್, ಫ್ರೂಟ್ ಬೌಲ್, ಶೇವಿಂಗ್ ಕಿಟ್, ಟವೆಲ್, ಟೂತ್‌ಪೇಸ್ಟ್, ಬ್ರಷ್, ಸೋಪ್, ಶಾಂಪೂ, ಬಾಚಣಿಗೆ ಮತ್ತು ಎಣ್ಣೆಯನ್ನು ವ್ಯವಸ್ಥೆ ಮಾಡಬೇಕಾಗಿತ್ತು.
ಬನ್ಸಾಲ್ ವಿರುದ್ಧ ಶೋಕಾಸ್ ನೋಟಿಸ್ ನೀಡಲಾಗಿದ್ದು, 7 ದಿನಗಳಲ್ಲಿ ಪ್ರತಿಕ್ರಿಯಿಸಲು ಕೇಳಲಾಗಿದೆ. ಮೂಲಗಳ ಪ್ರಕಾರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಲಾಗಿದೆ.
ಬನ್ಜಾಲ್ 1987 ರ ಬ್ಯಾಚ್‌ನ ಭಾರತೀಯ ದೂರಸಂಪರ್ಕ ಸೇವಾ ಅಧಿಕಾರಿ. ಅವರು ಎಲೆಕ್ಟ್ರಾನಿಕ್ಸ್‌ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ, ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಸ್ಟರ್ ಆಫ್ ಎಂಜಿನಿಯರಿಂಗ್ ಮತ್ತು MBA ಪದವಿ ಪಡೆದಿದ್ದಾರೆ. BSNL ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ, ಅವರು ಭಾರತದಲ್ಲಿ ಟೆಲಿಕಾಂ ನೆಟ್‌ವರ್ಕ್‌ಗಳನ್ನು ನಿರ್ವಹಿಸುವಲ್ಲಿ 34 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ.
