ಮುಸ್ಲಿಮ್ ಸಮುದಾಯಕ್ಕೆ ಸೇರಿದ ಹಾಗೂ ಪೂರ್ವಾಶ್ರಮದಲ್ಲಿ ಮಹಮದ್ ನಿಸಾರ್ ಆಗಿದ್ದ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕು ಚೌಡಹಳ್ಳಿ ಗ್ರಾಮದಲ್ಲಿನ ಗುರುಮಲ್ಲೇಶ್ವರ ಶಾಖಾಮಠಕ್ಕೆ ಪೀಠಾಧಿಪತಿ ನಿಜಲಿಂಗ ಸ್ವಾಮೀಜಿ ಪೀಠ ತೊರೆದಿದ್ದಾರೆ.
ಮಠಾಧೀಶರಾಗಿದ್ದ ಅವರು ತಮ್ಮ ಮೂಲ ಧರ್ಮದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಹಾಗೂ ತಮ್ಮ ದಾಖಲೆಗಳಲ್ಲಿ ಮೂಲಧರ್ಮದ ಹೆಸರನ್ನೇ ಉಳಿಸಿಕೊಂಡಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮಠ ತೊರೆದಿದ್ದಾರೆ.
ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಹಮದ್ ನಿಸಾರ್ ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮ ದೀಕ್ಷೆ ಪಡೆದಿದ್ದರು.
ಲಿಂಗದೀಕ್ಷೆ ಪಡೆದ ಬಳಿಕ ಮಹಮದ್ ನಿಸಾರ್ ಅವರಿಗೆ ನಿಜಲಿಂಗ ಸ್ವಾಮೀಜಿ ಅಂತ ಮರುನಾಮಕರಣ ಮಾಡಲಾಗಿತ್ತು. ಶಾಖಾಮಠ ಮಠದ ನೂತನ ಕಟ್ಟಡ ಕಟ್ಟಿಸಿದ್ದ ಮಹದೇವ ಪ್ರಸಾದ್ ಎಂಬುವರು ಒಂದುವರೆ ತಿಂಗಳ ಹಿಂದೆ ಸ್ವಾಮೀಜಿಯೊಬ್ಬರ ಶಿಫಾರಿಸ್ಸಿನ ಮೇರೆಗೆ ನಿಜಲಿಂಗ ಸ್ವಾಮೀಜಿ ಅವರನ್ನು ಕರೆತಂದು ಮಠಾಧೀಶರನ್ನಾಗಿ ಮಾಡಿದ್ದರು.
ಕಳೆದ ಒಂದುವರೆ ತಿಂಗಳಿಂದ ಚೌಡಹಳ್ಳಿಯ ಗುರುಮಲ್ಲೇಶ್ವರ ಮಠದಲ್ಲಿ ಪ್ರವಚನ ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದರು. ಭಕ್ತರೊಬ್ಬರು ಸ್ವಾಮೀಜಿಯ ಮೊಬೈಲ್ನಲ್ಲಿನ ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ನೋಡಿದಾಗ, ಅದರಲ್ಲಿ ನಿಸಾರ್ ಮಹಮದ್ ಎಂದು ಇತ್ತು. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ವಾಮೀಜಿಯ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಾಗಿದೆ.
ನಾನು ಅನ್ಯ ಧರ್ಮದವನಾದರೂ ಬಸವತತ್ವ ದಿಂದ ಆಕರ್ಷಿತನಾಗಿ ಜಂಗಮ ದೀಕ್ಷೆ ಪಡೆದಿದ್ದೇನೆ ಎಂದು ನಿಜಲಿಂಗ ಸ್ವಾಮೀಜಿ ಹೇಳಿದರು. ಗುಂಡ್ಲುಪೇಟೆ ಪೊಲೀಸರ ಮದ್ಯಸ್ಥಿಕೆಯಲ್ಲಿ ಸಭೆ ನಡೆಯಿತು. ಗ್ರಾಮಸ್ಥರಿಗೆ ಇಷ್ಟವಿಲ್ಲದಿದ್ದರೆ ತಾವು ಪೀಠದಲ್ಲಿ ಮುಂದುವರಿಯುವುದಿಲ್ಲ ಪೀಠತ್ಯಾಗ ಮಾಡುತ್ತೇನೆ ಎಂದು ನಿಜಲಿಂಗ ಸ್ವಾಮೀಜಿ ಯಾದಗಿರಿಗೆ ವಾಪಸ್ ತೆರಳಿದ್ದಾರೆ.



