ಪ್ರಧಾನಿ ನರೇಂದ್ರ ಮೋದಿ ದೆಹಲಿ ಮತ್ತು ಮೀರತ್ ನಡುವಣ 83 ಕಿ.ಮೀ. ಉದ್ದದ ದೇಶದ ಅತ್ಯಂತ ವೇಗದ ಮೆಟ್ರೋ ರೈಲು ಸಂಚಾರವನ್ನು ಭಾನುವಾರ ದೆಹಲಿಯಲ್ಲಿ ಉದ್ಘಾಟಿಸಿದ್ದಾರೆ.
ಭಾನುವಾರ ಮಧ್ಯಾಹ್ನ 12.30ಕ್ಕೆ ಪ್ರಧಾನಿ ಮೆಟ್ರೋ ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಮ್ ರೈಲು ಸಂಚಾರವನ್ನು ಉದ್ಘಾಟಿಸಿದ್ದು, ಸಂಜೆ 6 ಗಂಟೆಯಿಂದ ರೈಲು ಸಂಚಾರ ಆರಂಭವಾಗಲಿದೆ. ಮೊದಲ ಹಂತದಲ್ಲಿ 23 ಕಿ.ಮೀ.ವರೆಗೆ ಈ ರೈಲು ಸಂಚರಿಸಲಿದೆ.
ಸಾರಾಯಿ ಕಾಲೆ ಖಾನ್ ಮತ್ತು ದೆಹಲಿಯ ನ್ಯೂ ಅಶೋಕ್ ನಗರ್ ನಡುವೆ 5 ಕಿ.ಮೀ. ಹಾಗೂ ಮೀರತ್ ದಕ್ಷಿಣ-ಮೋದಿಪುರಂ ನಡುವೆ 23 ಕಿ.ಮೀ. ಸಂಚರಿಸಲಿದೆ. ಒಟ್ಟಾರೆ 28 ಕಿ.ಮೀ. ಉದ್ದದ ರೈಲು ಸಂಚಾರ ಕೇವಲ 1 ಗಂಟೆಯಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಬಹುದಾಗಿದೆ.
ಮೆಟ್ರೋ ರ್ಯಾಪಿಡ್ ರೈಲು ಗರಿಷ್ಠ 180 ಕಿ.ಮೀ. ವೇಗವಾಗಿ ಸಂಚರಿಸಲಿದ್ದು, ಸಾಮಾನ್ಯವಾಗಿ 160 ಕಿ.ಮೀ. ವೇಗವಾಗಿ ಸಂಚರಿಸಲಿದೆ. ದೆಹಲಿಯ ಗ್ರಾಮೀಣ ಪ್ರದೇಶವಾದ ಶಹಿದಾಬಾದ್, ಗಾಜಿಯಾಬಾದ್, ಮೋದಿನಗರ್ ಮತ್ತು ಮೀರತ್ ನಡುವೆ ಸಂಚಾರ ದಟ್ಟಣೆ ತಪ್ಪಿಸಿಕೊಂಡು ವೇಗವಾಗಿ ಈ ಪ್ರದೇಶಗಳನ್ನು ಸಂಪರ್ಕಿಸಬಹುದು.



