ಕಳೆದ ವರ್ಷ ಡಿಸೆಂಬರ್ ನಲ್ಲಿ ಪುಷ್ಪ-2 ಚಿತ್ರದ ಬಿಡುಗಡೆ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಘಟನೆ ಸಂಬಂಧ ಬರೋಬ್ಬರಿ ಒಂದು ವರ್ಷದ ನಂತರ ಹೈದರಾಬಾದ್ ಪೊಲೀಸರು ನಟ ಅಲ್ಲು ಅರ್ಜುನ್ ಸೇರಿದಂತೆ 23 ಮಂದಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
2024 ಡಿಸೆಂಬರ್ 24ರಂದು ಸಂಧ್ಯಾ ಥಿಯೇಟರ್ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಕುರಿತು ಹೈದರಾಬಾದ್ ನ ಚಿಕ್ಕಡಪಲ್ಲಿ ಪೊಲೀಸರು 100 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿಯಾಗಿ ಉಲ್ಲೇಖಿಸಲಾಗಿದೆ.
ನಟ ಅಲ್ಲು ಅರ್ಜುನ್, ಅಲ್ಲು ಅರ್ಜುನ್ನ ಮೂವರು ಮ್ಯಾನೇಜರ್, 8 ಬೌನ್ಸರ್, ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿ ಸೇರಿದಂತೆ 23 ಮಂದಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಸುರಕ್ಷತಾ ಕ್ರಮಗಳನ್ನು ನೇರವೇರಿಸುವಲ್ಲಿ ವಿಫಲವಾಗಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಸಂಧ್ಯಾ ಥೀಯೆಟರ್ಗೆ ಭೇಟಿ ಕೊಡುತ್ತಾರೆಂದು ತಿಳಿದರೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಆರೋಪದ ಮೇಲೆ ಅದರ ಆಡಳಿತ ಮಂಡಳಿ ಮತ್ತು ಮಾಲೀಕರ ಹೆಸರನ್ನೂ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.
ಅಲ್ಲದೇ ಜನಜಂಗುಳಿ ಹೆಚ್ಚಿದ್ದರೂ ಅದನ್ನು ಲೆಕ್ಕಿಸದೆ ಮಂದುವರೆದಿದ್ದಕ್ಕಾಗಿ ಅಲ್ಲು ಅರ್ಜುನ್ ಹೆಸರನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆಯಾಗಿ 24 ವ್ಯಕ್ತಿಗಳ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಅವರ ವೈಯಕ್ತಿಕ ಮ್ಯಾನೇಜರ್, ಸಿಬ್ಬಂದಿ ಸದಸ್ಯರು ಮತ್ತು ಎಂಟು ಖಾಸಗಿ ಬೌನ್ಸರ್‌ಗಳು ಸೇರಿದ್ದಾರೆ. ಅವರ ಬೇಜವಾಬ್ದಾರಿತನದ ನಡೆಯಿಂದಾಗಿ ಸಮಸ್ಯೆ ಉಲ್ಬಣಿಸಿದವು ಎಂದು ತೀರ್ಮಾನಿಸಲಾಗಿದೆ.
ಏನಿದು ಪ್ರಕರಣ?
ಡಿಸೆಂಬರ್ 4, 2024 ರಂದು ಪುಷ್ಪ 2 ಚಿತ್ರ ತೆರೆಕಂಡ ಸಮಯದಲ್ಲಿ ಹೈದರಾಬಾದ್ ಆರ್‌ಟಿಸಿ ಥಿಯೇಟರ್‌ನ ಪ್ರೀಮಿಯರ್ ಸ್ಕ್ರೀನಿಂಗ್ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಅಪಾರ ಜನಸಮೂಹ ಸೇರಿತ್ತು.
ಈ ವೇಳೆ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆಯ ಸಾವಿಗೆ ಕಾರಣವಾಯಿತು.ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ರೇವತಿ ಸಾವನ್ನಪ್ಪಿದ್ದು, ಅವರ ಅಪ್ರಾಪ್ತ ಮಗ ಶ್ರೀತೇಜ್ಗೆ ಆಮ್ಲಜನಕದ ಕೊರತೆ ಉಂಟಾದ ಕಾರಣ ಹಾಸಿಗೆ ಹಿಡಿದಿದ್ದರು.



