ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ಜಿತೇಶ್ ಕುಮಾರ್ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳಿಂದ ಗೆದ್ದು ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತ ಚೇಸ್ ಮಾಡಿದ ದಾಖಲೆ ಗೆಲುವಿನೊಂದಿಗೆ 2ನೇ ಸ್ಥಾನಕ್ಕೆ ಲಗ್ಗೆ ಹಾಕಿತು.
ಲಕ್ನೋದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿ 228 ರನ್ ಗುರಿಯನ್ನು 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಲಕ್ನೂ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತ್ತು. ಇದು ಆರ್ ಸಿಬಿಯ ಅತ್ಯಧಿಕ ಮೊತ್ತದ ಚೇಸ್ ಆಗಿದ್ದರೆ ಒಟ್ಟಾರೆ 3ನೇ ಗರಿಷ್ಠ ಮೊತ್ತ ಬೆಂಬತ್ತಿದ ದಾಖಲೆ ಬರೆದಿದೆ.
ಈ ಗೆಲುವಿನೊಂದಿಗೆ ಆರ್ ಸಿಬಿ 14 ಪಂದ್ಯಗಳಿಂದ 19 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಕ್ವಾಲಿಫೈಯರ್ ಪ್ರವೇಶಿಸಿತು. ಆರ್ ಸಿಬಿ 16 ಓವರ್ ಒಳಗೆ ಗೆಲುವು ಸಾಧಿಸಿದ್ದರೆ ಅಗ್ರಸ್ಥಾನಕ್ಕೇರಬಹುದಿತ್ತು. ಆದರೆ ಬೃಹತ್ ಮೊತ್ತ ಯಶಸ್ವಿಯಾಗಿ ಚೇಸ್ ಮಾಡಲು 18.4 ಓವರ್ ತೆಗೆದುಕೊಂಡಿತು. ಆದರೂ ಆರ್ ಸಿಬಿ 2009 ಮತ್ತು 2011ರ ನಂತರ ಮೊದಲ ಬಾರಿ ಎರಡನೇ ಸ್ಥಾನಿಯಾಗಿ ಕ್ವಾಲಿಫೈಯರ್ ಪ್ರವೇಶಿಸಿದ ಸಾಧನೆ ಮಾಡಿತು.
ಆರ್ ಸಿಬಿಗೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಮೊದಲ ವಿಕೆಟ್ ಗೆ 61 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ಸಾಲ್ಟ್ (20) ಮತ್ತು ರಜತ್ ಪಟಿದಾರ್ (14) ಮತ್ತು ಲಿಯಾಮ್ ಲಿವಿಂಗ್ ಸ್ಟನ್ (0) ಒಬ್ಬರ ಹಿಂದೆ ಒಬ್ಬರಂತೆ ನಿರ್ಗಮಿಸಿದರು. ಈ ಹಂತದಲ್ಲಿ 30 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡ 54 ರನ್ ಪೇರಿಸಿ ಔಟಾದರು. ಈ ಹಂತದಲ್ಲಿ ಆರ್ ಸಿಬಿ 123 ರನ್ ಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು.
ತಂಡ ಸಂಕಷ್ಟ ಸಮಯದಲ್ಲಿ 5ನೇ ವಿಕೆಟ್ ಗೆ ಜೊತೆಯಾದ ಮಯಾಂಕ್ ಅಗರ್ ವಾಲ್ ಮತ್ತು ಜಿತೇಶ್ ಕುಮಾರ್ 46 ರನ್ ಗೆ 107 ರನ್ ಜೊತೆಯಾಟ ನಿಭಾಯಿಸಿದರು. ಜಿತೇಶ್ ಕುಮಾರ್ 33 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಸೇರಿದ 85 ರನ್ ಸಿಡಿಸಿ ಗೆಲುವಿನ ರೂವಾರಿಯಾದರೆ, ದಶಕದ ನಂತರ ಆರ್ ಸಿಬಿಗೆ ಮರಳಿದ್ದ ಮಯಾಂಕ್ ಅಗರ್ ವಾಲ್ 23 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 41 ರನ್ ಬಾರಿಸಿ ಉತ್ತಮ ಬೆಂಬಲ ನೀಡಿದರು.
ಪಂತ್ ಶತಕದ ಬಲ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಸಿಡಿಸಿದ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು.
ಆರಂಭಿಕ ಮ್ಯಾಥ್ಯೂ ಬ್ರಿಟೆಕ್ಸ್ (14) ಔಟಾದ ನಂತರ ಜೊತೆಯಾದ ಮಿಚೆಲ್ ಮಾರ್ಷ್ ಮತ್ತು ರಿಷಭ್ ಪಂತ್ ಎರಡನೇ ವಿಕೆಟ್ ಗೆ 152 ರನ್ ಜೊತೆಯಾಟದಿಂದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಪಂತ್ 61 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ 118 ರನ್ ಗಳಿಸಿದರು. ಇದು ಅವರ 2ನೇ ಶತಕವಾಗಿದೆ. ಮಿಚೆಲ್ ಮಾರ್ಷ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 67 ರನ್ ಗಳಿಸಿದರು.



