ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸಾಲು ಸಾಲು ಹತ್ಯೆಗಳ ಬಳಿಕ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಎತ್ತಂಗಡಿ ಮಾಡಿದೆ.
ಪೊಲೀಸ್ ಕಮಿಷನರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಹಾಗೂ ದಕ್ಷಿಣ ಕನ್ನಡ ಎಸ್‌ಪಿ ಯತೀಶ್.ಎನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಡುಪಿ ಎಸ್ ಪಿ ಅರುಣ್ ಅವರನ್ನು ನೇಮಕ ಮಾಡಲಾಗಿದೆ.
ಗುಪ್ತದಳದ ಡಿಐಜಿ ಆಗಿದ್ದ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ವರ್ಗಾಯಿಸಲಾಗಿದೆ.
ಉಡುಪಿಯ ಎಸ್ ಪಿ ಡಾ. ಅರುಣ್ ಕೆ. ಅವರನ್ನು ದಕ್ಷಿಣ ಕನ್ನಡ, ಮಂಗಳೂರಿನ ಎಸ್‌ಪಿ ಆಗಿ ವರ್ಗಾಯಿಸಲಾಗಿದೆ. ಇಂಟಲಿಜೆನ್ಸ್‌ನ ಎಸ್‌ಪಿ ಆಗಿದ್ದ ಹರಿರಾಮ್ ಶಂಕರ್ ಅವರನ್ನು ಉಡುಪಿಯ ಎಸ್‌ಪಿ ಆಗಿ ವರ್ಗಾಯಿಸಲಾಗಿದೆ.
ಮಂಗಳೂರು ನಗರದ ಡಿಐಜಿ ಹಾಗೂ ಆಯುಕ್ತರಾಗಿದ್ದ ಅನುಪಮ್ ಅಗರವಾಲ್ ಅವರನ್ನು ಆರ್ಥಿಕ ಅಪರಾಧಗಳ ಹಾಗೂ ಅಪರಾಧ ತನಿಖೆ ವಿಭಾಗದ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ಕಮೀಷನರ್ ವರ್ಗಾವಣೆ:
ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ಸ್ ಹಾಗೂ ಅಪರಾಧ ತನಿಖೆ ವಿಭಾಗದ ಡಿಐಜಿ ಆಗಿದ್ದ ಬೋರಸೆ ಭೂಷಣ್ ಗುಲಾಬ್‌ರಾವ್ ಅವರನ್ನು ಬೆಳಗಾವಿ ನಗರದ ಡಿಐಜಿ ಮತ್ತು ಆಯುಕ್ತರಾಗಿ ವರ್ಗಾಯಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಎರಡು ಕೋಮುವಿದ್ವೇಷದ ಕೊಲೆಗಳು ನಡೆದಿವೆ. ಮೇ 27ರಂದು ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಎಂಬಾತನನ್ನು ಕೊಚ್ಚಿ ಕೊಲ್ಲಲಾಗಿತ್ತು.
ಮೇ 1ರಂದು ಮಂಗಳೂರಿನ ವಾಮಂಜೂರು ಬಳಿ ಸುಹಾಸ್ ಶೆಟ್ಟಿ ಎಂಬ ಹಿಂದೂ ಕಾರ್ಯಕರ್ತನನ್ನು ಮಾರಕಾಯುಧಗಳಿಂದ ಕೊಲೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಲಾಗಿತ್ತು



