Friday, May 15, 2026
Google search engine
Homeರಾಜಕೀಯನನ್ನ-ಡಿಕೆಶಿ ಸಂಬಂಧ ಹಾಲು ಜೇನಿನ ತರಹ ಹುಳಿ ಹಿಂಡಲು ಆಗಲ್ಲ: ಸಿದ್ದರಾಮಯ್ಯ ತಿರುಗೇಟು

ನನ್ನ-ಡಿಕೆಶಿ ಸಂಬಂಧ ಹಾಲು ಜೇನಿನ ತರಹ ಹುಳಿ ಹಿಂಡಲು ಆಗಲ್ಲ: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಮತ್ತು ನನ್ನ ನಡುವಿನ ಸಂಬಂಧ ಹಾಲು ಜೇನಿನ ತರಹ ಇದೆ. ಯಾರಿಗೂ ಹುಳಿ ಹಿಂಡಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಬಣದ ವಿರುದ್ಧ ಸಿಎಂ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ ಅವರು, ಕಾಂಗ್ರೆಸ್ ಪಕ್ಷದವರೇ ಮುಂದೆ ಸಿಎಂ ಆಗುತ್ತಾರೆ ಎಂದು ಭರವಸೆ ನೀಡಿದರು.

ಸುಳ್ಳು ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಅವರು, ತಾ ಕಳ್ಳ ಇತರರ ನಂಬ ಎಂಬ ಗಾದೆಯಂತೆ, ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದಿದ್ದಾರೆ.

ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ಇವರು. ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಿದ್ದಾರೆ. ಅದರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು, ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗಲ್ಲ, ಇದು ನಿಮ್ಮಿಬ್ಬರಿಗೂ ತಿಳಿದಿರಲಿ ಎಂದು ತಿರುಗೇಟು ನೀಡಿದ್ದಾರೆ.

ಸುಳ್ಳು ಸುದ್ದಿಗಳನ್ನು ಹರಡಿ ನಮ್ಮಿಬ್ಬರ ಸಂಬಂಧವನ್ನು ಕೆಡಿಸಲು ಆಗಲ್ಲ. ಡಿಕೆಶಿ ಒಲಿಸಿಕೊಳ್ಳುವ ದುರಾಲೋಚನೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದ್ರೆ, ಅದು ಹಗಲು ಕನಸು. ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗ. ಸುಳ್ಳು ಕೇಸ್‌ಗಳನ್ನು ಹಾಕಿ, ಜೈಲಿಗೆ ಕಳಿಸಿ ಅವರನ್ನು ಮಣಿಸುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿಯಾಗಿದೆ. ಇದಕ್ಕೆಲ್ಲ ಮಣಿಯದೆ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದವರು. ಈ ಕುತಂತ್ರಿ ನಾಯಕರಿಗೆ ತಿಳಿದಿರಲಿ ಎಂದು ಕಿಡಿಕಾರಿದ್ದಾರೆ.

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ನಮ್ಮ ಶಾಸಕರಲ್ಲಿ ಯಾರೂ ಕೂಡಾ ನನ್ನ ಇಲ್ಲವೇ ಡಿ.ಕೆ.ಶಿವಕುಮಾರ್ ಬೆಂಬಲಿಗರಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸ್ತಾರೆ.

ಜೊತೆಯಲ್ಲಿ ಊಟ-ತಿಂಡಿ ಮಾಡುವ ಎಲ್ಲ ಸ್ವಾತಂತ್ರ‍್ಯಗಳು ಅವರಿಗೆ ಇದೆ. ಆದರೆ ಯಾವ ಶಾಸಕರು ಏನನ್ನೇ ಹೇಳಿದರೂ ಅಂತಿಮವಾಗಿ ಹೈಕಮಾಂಡ್ ಆದೇಶಕ್ಕೆ ಬದ್ಧವಾಗಿರಬೇಕು. ಶಾಸಕರು ಸೇರಿದಂತೆ ನಾನು ಮತ್ತು ಶಿವಕುಮಾರ್ ನಮ್ಮ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗುವವರು ಇದನ್ನು ನಾವಿಬ್ಬರೂ ಒಂದಲ್ಲ ನೂರು ಬಾರಿ ಹೇಳಿದ್ದೇವೆ. ಇದೇ ಅಂತಿಮ ಸತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಚೌಕ್ ಕೊಟ್ಟಿದ್ದು, ಈ ಅವಧಿಯನ್ನ ಕಾಂಗ್ರೆಸ್ ಪಕ್ಷ ಪೂರ್ಣಗೊಳಿಸಲಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಇರುತ್ತಾರೆ ಎನ್ನುವ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳದ ಸಿಎಂ ಸಿದ್ದರಾಮಯ್ಯ ನಡೆ ವಿರೋಧಿಗಳನ್ನ ಚಿತ್ ಮಾಡುವ ತಂತ್ರವೋ? ಹೈಕಮಾಂಡ್ ತೀರ್ಮಾನದ ಆತಂಕವೋ? ಅಡ್ಡೇಟಿನ ಗೂಗ್ಲಿಯೋ? ಎಂಬ ಚರ್ಚೆ ಜೋರಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments