ಸೈಟ್ ಕೊಟ್ಟರೆ ಸಂಸಾರ ಮಾಡ್ತಾನೆ. ಮಕ್ಕಳು ಬೇಕಾದರೆ ಮೈದುನ ಜೊತೆ ಮಗು ಎಂದು ಅತ್ತೆ-ಮಾವನ ಮಾತು ಕೇಳಿ ಆಘಾತಕ್ಕೆ ಒಳಗಾದ ಉಪನ್ಯಾಸಕಿ ಸೆಲ್ಫಿ ವೀಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ದೊಡ್ಡಬಳ್ಳಾಪುರದ ಸೋತೇನಹಳ್ಳಿ ನಿವಾಸಿ ಪುಷ್ಪವತಿ (23) ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ.
ಉಪನ್ಯಾಸಕಿಯ ತಂದೆ ತಾಯಿಗೆ 4 ಮಂದಿ ಹೆಣ್ಣು ಮಕ್ಕಳಿದ್ದು, ಕೊನೆಯ ಮಗಳಾಗಿದ್ದಾರೆ. ದೊಡ್ಡಬಳ್ಳಾಪುರ ತಪಸೀಹಳ್ಳಿ ಗ್ರಾಮದ ವೇಣು ಎಂಬವನ ಜೊತೆ ಕಳೆದ 2024ರ ನವೆಂಬರ್‌ನಲ್ಲಿ ಲಕ್ಷಾಂತರ ವರದಕ್ಷಿಣೆ ನೀಡಿ ಅದ್ದೂರಿಯಾಗಿ ಮದುವೆ ಮಾಡಿದ್ದರು. ಮದುವೆ ಚೆನ್ನಾಗಿ ಮಾಡಿಕೊಟ್ಟರೂ ವೇಣು ಹೆಂಡತಿ ಜೊತೆ ಸಂಸಾರ ಮಾಡುತ್ತಿರಲಿಲ್ಲ.
ಗಂಡನ ನಡವಳಿಕೆಯಿಂದ ಅನುಮಾನಗೊಂಡ ಉಪನ್ಯಾಸಕಿ ಏನೋ ಸಮಸ್ಯೆ ಇರಬೇಕು ಎಂದು ವೈದ್ಯರಿಗೆ ತೋರಿಸೋಣ ಅಂದರೂ ಮಾತು ಕೇಳಳುತ್ತಿರಲಿಲ್ಲ. ಪುಷ್ಪವತಿ ಅತ್ತೆ ಭಾರತಿ ಮಾವ ಗೋವಿಂದಪ್ಪನ ಬಳಿ ಸಮಸ್ಯೆ ಹೇಳಿಕೊಂಡಿದ್ದರು. ಆದರೆ ಅತ್ತೆ- ಮಾನವ ಮಾತು ಕೇಳಿ ಶಾಕ್ ಆಗಿದ್ದಾರೆ. ಮಗನನ್ನೇ ಬೆಂಬಲಿಸಿದ ಅತ್ತೆ ಮಾವ ದೊಡ್ಡಬಳ್ಳಾಪುರದಲ್ಲಿ ಒಂದು ನಿವೇಶನ ಕೊಟ್ರೆ ಮಾತ್ರ ಮಗ ಸಂಸಾರ ಮಾಡ್ತಾನೆ ಎಂದಿದ್ದರಂತೆ. ಅಷ್ಟಕ್ಕೂ ನಿನಗೆ ಮಗು ಮಾಡಿಕೊಳ್ಳಲು ಅರ್ಜೆಂಟ್ ಇದ್ರೆ ಚಿಕ್ಕ ಮಗ ಮೈದುನನ ಜೊತೆಯಲ್ಲೇ ಮಲಗು ಎಂದು ಸಲಹೆ ನೀಡಿದ್ದಾರೆ.
ತಿಂಗಳ ಹಿಂದೆ ನಡೆದ ಗಲಾಟೆ ವೇಳೆ ಪುಷ್ಪವತಿ ಮೇಲೆ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಆಗ ಪುಷ್ಪವತಿ ತವರು ಮನೆಗೆ ವಿಚಾರ ತಿಳಿಸಿ ಕೊನೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ನೂ ದೂರು ದಾಖಲಾದ ನಂತರ ತವರು ಮನೆಯಲ್ಲೇ ಇದ್ದ ಪುಷ್ಪವತಿ ಮನೆಯಲ್ಲಿದ್ರೆ ಮನಸ್ಸು ಸರಿ ಇರಲ್ಲ ಅಂತ ಮತ್ತೆ ಉಪನ್ಯಾಸಕ ವೃತ್ತಿಗೆ ಸೇರಿಕೊಂಡಿದ್ದರು.
ಕೆಲಸಕ್ಕೆ ಹೋಗಿ ಬರ್ತಿದ್ದ ಪುಷ್ಪವತಿಯನ್ನ ದೊಡ್ಡಬಳ್ಳಾಪುರದ ಡಿ ಕ್ರಾಸ್ ಬಸ್ಟಾಂಡ್‌ನಲ್ಲಿ ಅಡ್ಡ ಹಾಕಿ ಗಂಡ ಆಕೆಯ ಮುಖಕ್ಕೆ ಉಗಿದು ಸಾರ್ವಜನಿಕರ ಎದುರೇ ನಮ್ಮ ಮೇಲೆಯೇ ಕಂಪ್ಲೇಂಟ್ ಕೊಡ್ತಿಯಾ? ನಿನಗೆ ನೋಡು ನಾನ್ ಒಂದು ಗತಿ ಕಾಣಿಸ್ತೀನಿ? ಮತ್ತೊಂದು ಮದುವೆ ಮಾಡ್ಕೊಂಡು ನಾನ್ ಏನ್ ಅಂತ ತೋರಿಸ್ತೀನಿ ಅಂತ ಧಮ್ಕಿ ಹಾಕಿ ಬೆದರಿಕೆ ಹಾಕಿದ್ದನಂತೆ.
ನಡೆದ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದ ಪುಷ್ಪವತಿ ಮರುದಿನ ಎಂದಿನಂತೆ ಕಾಲೇಜಿಗೆ ಅಂತ ಹೋದವಳು ಮನೆಗೆ ವಾಪಾಸ್ ಬಂದಿರಲಿಲ್ಲ. ಆದ್ರೆ ಎರಡು ದಿನದ ನಂತರ ಆಕೆಯ ಶವ ದೊಡ್ಡಬಳ್ಳಾಪುರ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಪತ್ತೆಯಾಗಿದೆ.
ಶನಿವಾರ ಕಾಲೇಜಿಗೆ ಪಾಠ ಮಾಡಲು ಹೋದ ಮಗಳು ಮನೆಗೆ ಬರಲಿಲ್ಲ ಅಂತ ಕುಟುಂಬಸ್ಥರು ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ಲೊಕೇಷನ್ ಪತ್ತೆ ಮಾಡಿದಾಗ ಅವರ ಮೊಬೈಲ್ ಡ್ಯಾಂ ಬಳಿ ಪತ್ತೆಯಾಗಿತ್ತು. ಅಲ್ಲದೇ ಮೃತದೇಹ ಸಿಕ್ಕಿತ್ತು. ಮೊಬೈಲ್‌ನಲ್ಲಿ ವೀಡಿಯೋ ಸಹ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ವೇಣು ಹಾಗೂ ಮಾವ ಗೋವಿಂದಪ್ಪನನ್ನ ಬಂಧಿಸಿ, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



