ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕೊಲೆಗೈದ ಸಿಆರ್ ಪಿಎಫ್ ಯೋಧ ಪೊಲೀಸರಿಗೆ ಶರಣಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಕಛ್ ಜಿಲ್ಲೆಯ ಅಂಜಾರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ ಸ್ಪೆಕ್ಟರ್ ಆಗಿದ್ದ ಅರುಣಾಬೆನ್ ನಟುಭಾಯಿ ಜಾಧವ್ (25) ಅವರನ್ನು ಹತ್ಯೆಗೈದ ಸಿಆರ್ಪಿಎಫ್ ಯೋಧ ದಿಲೀಪ್ ಡಾಂಗ್ಚಿಯಾ ಆಕೆ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿಲೀಪ್ ಮತ್ತು ಅರುಣಾಬೆನ್ ಹಲವು ವರ್ಷಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು.
ಶನಿವಾರ ರಾತ್ರಿ ಅರುಣಾಬೆನ್ ಮತ್ತು ದಿಲೀಪ್ ನಡುವೆ ಮನೆಯಲ್ಲಿ ಜಗಳವಾಗಿದೆ. ಜಗಳದ ವೇಳೆ ಅರುಣಾಬೆನ್ ತಾಯಿಯ ಬಗ್ಗೆ ಅವಹೇಳನಕಾರಿ ಮಾತಾಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
2021ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಇಬ್ಬರು ಪರಿಚಯ ಆಗಿದ್ದರು. ಬಳಿಕ ಒಂದೇ ಕಡೆ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ವಾಸವಾಗಿದ್ದು, ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಕ್ಷುಲಕ ವಿಷಯದಲ್ಲಿ ನಡೆದ ಜಗಳದಿಂದ ಇಬ್ಬರ ಜೀವನವೂ ದಾರುಣವಾಗಿ ಅಂತ್ಯಗೊಂಡಿದೆ.



