Wednesday, May 13, 2026
Google search engine
Homeವಿದೇಶಪಾಕಿಸ್ತಾನದ ದರ್ಗಾದ ಮೇಲೆ ಆತ್ಮಾಹುತಿ ದಾಳಿಗೆ 69 ಬಲಿ: ತುರ್ತು ಪರಿಸ್ಥಿತಿ ಘೋಷಣೆ

ಪಾಕಿಸ್ತಾನದ ದರ್ಗಾದ ಮೇಲೆ ಆತ್ಮಾಹುತಿ ದಾಳಿಗೆ 69 ಬಲಿ: ತುರ್ತು ಪರಿಸ್ಥಿತಿ ಘೋಷಣೆ

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ದರ್ಗಾ ಮೇಲೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 69 ಮಂದಿ ಸಾವಿಗೀಡಾಗಿದ್ದಾರೆ.

ತರ್ಲೈ ಇಮಾಮ್‌ಬರ್ಗಾದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಸಾಮೂಹಿಕ ಪ್ರಾರ್ಥನೆ ವೇಳೆ ದರ್ಗಾದ ಗೇಟ್ ಬಳಿ ಆತ್ಮಾಹುತಿ ವ್ಯಕ್ತಿಯನ್ನು ಗುರುತಿಸಿ ಆತ ಕಟ್ಟಡದೊಳಗೆ ಪ್ರಮುಖ ಹಾಲ್ ಪ್ರವೇಶಿಸದಂತೆ ತಡೆದಿದ್ದಾರೆ. ಈ ವೇಳೆ ಆತ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ.

ಸ್ಫೋಟದ ತೀವ್ರತೆಗೆ 69 ಜನ ಮೃತಪಟ್ಟಿದ್ದು, 169ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಫೋಟದ (Explosion) ಬಳಿಕ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಸ್ಫೋಟದ ತೀವ್ರತೆಗೆ ಕಟ್ಟಡಕ್ಕೆ ಹಾನಿಯಾಗಿದ್ದು, ಕಿಟಕಿ ಗಾಜುಗಳು ಹಾಗೂ ಗೇಟ್ ಸಂಪೂರ್ಣ ಛಿದ್ರಗೊಂಡಿದೆ. ರಸ್ತೆ ತುಂಬಾ ಆವಶೇಷಗಳು ಬಿದ್ದಿದ್ದು, ಭದ್ರತಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಗಾಯಾಳುಗಳನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಮತ್ತು ಪಾಲಿಕ್ಲಿನಿಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಈ ದಾಳಿಯನ್ನು ಖಂಡಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಪಾಕ್‌ ಕಾರ್ಯಾಚರಣೆ

ಪಾಕಿಸ್ತಾನಿ ಪಡೆಗಳು ಬಲೂಚಿಸ್ತಾನ ಪ್ರಾಂತ್ಯದಲ್ಲಿ ರದ್ದ್-ಉಲ್-ಫಿಟ್ನಾ-1 ಎಂಬ ಬೃಹತ್ ಕಾರ್ಯಾಚರಣೆ ವೇಳೆಯೇ ಇಸ್ಲಾಮಾಬಾದ್‌ನಲ್ಲಿ ಈ ದಾಳಿ ನಡೆದಿದೆ. ಜನವರಿ 26 ರಂದು ಪ್ರಾರಂಭಿಸಲಾದ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನಿ ಪಡೆಗಳು 216 ಬಲೂಚ್ ಬಂಡುಕೋರರನ್ನು ಹತ್ಯೆಗೈದಿದ್ದರು. ಈ ಕಾರ್ಯಾಚರಣೆಯಲ್ಲಿ 22 ಭದ್ರತಾ ಸಿಬ್ಬಂದಿ ಮತ್ತು 36 ನಾಗರಿರು ಪ್ರಾಣ ಕಳೆದುಕೊಂಡಿದ್ದಾರೆ.

4ನೇ ದೊಡ್ಡ ದಾಳಿ

ಕಳೆದ ಮೂರು ತಿಂಗಳಲ್ಲಿ ಪಾಕ್‌ನಲ್ಲಿ ನಡೆದ 4ನೇ ದೊಡ್ಡ ಆತ್ಮಹತ್ಯಾ ಬಾಂಬ್ ದಾಳಿ ಇದಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಇಸ್ಲಾಮಾಬಾದ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಈ ಅವಘಡದಲ್ಲಿ 12 ಜನರು ಸಾವನ್ನಪ್ಪಿ, 27 ಜನರು ಗಾಯಗೊಂಡಿದ್ದರು.

ಜ.24 ರಂದು ಪಾಕಿಸ್ತಾನದ (Pakistan) ವಾಯವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಾಂತಿ ಸಮಿತಿ ಸದಸ್ಯರೊಬ್ಬರ ನಿವಾಸದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದ (Wedding Ceremony) ವೇಳೆ ಆತ್ಮಾಹುತಿ ಬಾಂಬ್‌ ದಾಳಿ ನಡೆದಿತ್ತು. ಇದರಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದರು.

ಜನವರಿ ಅಂತ್ಯದಲ್ಲಿ ಪಾಕಿಸ್ತಾನದದಲ್ಲಿ ಬಲೂಚ್‌ ಆರ್ಮಿಯ ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್‌ಗಳು ನಡೆಸಿದ್ದ ದಾಳಿಯಲ್ಲಿ 17 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಸಾವನ್ನಪ್ಪಿದ್ದರು.

ಬಲೂಚಿಸ್ತಾನ್ ಪಾಕ್‌ನಿಂದ ಸ್ವಾತಂತ್ರ್ಯ ಬಯಸುತ್ತಿದೆ. ಇದರೊಂದಿಗೆ 60 ಬಿಲಿಯನ್ ಡಾಲರ್‌ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ (CPEC) ಸಂಬಂಧಿಸಿದ ಯೋಜನೆಗಳನ್ನು ಬಲೂಚ್‌ ಹೋರಾಟಗಾರರು ವಿರೋಧಿಸುತ್ತಿದ್ದಾರೆ. ಇದೇ ಕಾರಣಕ್ಕೆ ಬಹಳ ಹಿಂದಿನಿಂದಲೂ ದಂಗೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments