ಬಳ್ಳಾರಿ: ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಬಳ್ಳಾರಿಯ ಲಾರಿ ಚಾಲಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಪೊಲೀಸರು ಕರ್ನಾಟಕ ಸೇರಿದಂತೆ ಆಂಧ್ರ, ಬಿಹಾರ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬಳ್ಳಾರಿ ನಗರದ ಲಾರಿ ಚಾಲಕ ಅಬ್ದುಲ್ ಸಲಾಂ (36) ಎಂಬಾತನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಆಗಮಿಸಿದ್ದ ಆಂಧ್ರ ಪ್ರದೇಶ ಪೊಲೀಸರು, ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ನೆರವಿನೊಂದಿಗೆ ಅಬ್ದುಲ್ ಸಲಾಮ್ ನನ್ನು ಬಂಧಿಸಿದ್ದಾರೆ. ಈತ ಉಗ್ರ ಸಿದ್ಧಾಂತಗಳನ್ನು ಆನ್‌ಲೈನ್ ಮೂಲಕ ಪ್ರಚಾರ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಪಂಚನಾಮೆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಉಗ್ರವಾದ ಹರಡುವುದು ಮತ್ತು ಭಯೋತ್ಪದನಾ ಸಂಘಟನೆಗಳ ನಂಟು ಹೊಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಈ ಬಗ್ಗೆ ಮಾರ್ಚ್ 23ರಂದು ವಿಜಯವಾಡ ಟೌನ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು.
ಸರ್ಚ್ ವಾರೆಂಟ್ ಪಡೆದು ಕಾರ್ಯಾಚರಣೆಗಿಳಿದಿದ್ದ ಪೊಲೀಸರು, ವಿಜಯವಾಡದ ವಿಂಚ್ಪೇಟ್ನಲ್ಲಿ ಪ್ರಮುಖ ಅರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ (23) ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಿದ್ದಾಂತ ಮತ್ತು ಮೂಲಭೂತವಾದಿ ಐಎಸ್‌ಐಎಸ್ ಸಂಘಟನೆಗಳ ವಿಚಾರಧಾರೆ ಪ್ರಚಾರ ನಿರತರ ಬಗ್ಗೆ ಆತ ನೀಡಿದ್ದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಬಂಧಿಸಲಾಗಿದೆ.
ವಿದೇಶೀ ಉಗ್ರನ ಜೊತೆ ಸಂಪರ್ಕ
ಪ್ರಾಥಮಿಕ ತನಿಖೆಯಲ್ಲಿ, ಲಾರಿ ಚಾಲಕನಾಗಿರುವ ಅಬ್ದುಲ್ ಸಲಾಂ ಆನ್ ಲೈನ್ ವೇದಿಕೆಗಳ ಮೂಲಕ ಮೂಲಭೂತವಾದಿ ಚಿಂತನೆಗಳನ್ನು ಆನ್ ಲೈನ್ ಮುಲಕ ಹರಿ ಬಿಡುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.
ವಿದೇಶಿ ಉಗ್ರ ಅಲ್ ಹಕೀಮ್ ಸುಕೂರ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಾನೆಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಜಿಹಾದ್ ಪರಿಕಲ್ಪನೆಗಳನ್ನು ಪ್ರಚಾರ ಮಾಡುವ ಗುಂಪುಗಳೊಂದಿಗೆ ಸಹ ಈತನ ಸಂಪರ್ಕವಿದ್ದ ಎನ್ನುವುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆಂದು ಹೇಳಲಾಗಿದೆ.
ಘಟನೆ ಹಿನ್ನೆಲೆ ಬಳ್ಳಾರಿ ನಗರದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಸಂಶಯಾಸ್ಪದ ಚಟುವಟಿಕೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ವಿಜಯವಾಡ ಪೊಲೀಸರು ಈ ಪ್ರಕರಣ ಸಂಬಂಧ ತನಿಖೆಯನ್ನು ಮುಂದುವರೆಸಿದ್ದಾರೆ.



