ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರದ ಮೊರೆ ಹೋದ ಸಾಫ್ಟ್ ವೇರ್ ಇಂಜಿನಿಯರ್ ಗೆ ಗುರೂಜಿ 48 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಸ್ತೆ ಬದಿಯಲ್ಲಿ ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ ಬೋರ್ಡ್ ನೋಡಿ ಹೋದ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ವಿಜಯ್ ಗುರೂಜಿ ಎಂಬಾತ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಇದೀಗ ತನಗೆ 48 ಲಕ್ಷ ರೂ. ವಂಚನೆ ಆಗಿರುವ ಬಗ್ಗೆ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ.
2023ರಲ್ಲಿ ಮದುವೆ ಆಗಿದ್ದ ಟೆಕ್ಕಿ ಲೈಂಗಿಕ ಸಮಸ್ಯೆ ಎದುರಿಸುತ್ತಿದ್ದು, ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ಟೆಂಟ್ ಹೊರಗಡೆ ‘ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ’ ಎಂದು ಹಾಕಿದ್ದ ಬೋರ್ಡ್ ನೋಡಿ ಹೋಗಿದ್ದಾರೆ.
ಟೆಂಟ್ ಹೊಂದಿದ್ದ ವಿಜಯ್ ಗುರೂಜಿ ಎಂಬಾತ ಯಶವಂತಪುರದ ಆಯುರ್ವೇದಿಕ್ ಔಷಧದ ಅಂಗಡಿಯಲ್ಲಿ 1.60 ಲಕ್ಷ ನೀಡಿ ಒಂದು ಗ್ರಾಂ ತೂಕದ ದೇವರಾಜ್ ಬೂಟಿ ಹೆಸರಿನ ಔಷಧಿಯನ್ನು ಖರೀದಿಸಲು ಹೇಳಿದ್ದರು. ಮತ್ತು ಔಷಧ ಖರೀದಿಸಲು ಒಬ್ಬರೇ ಹೋಗಬೇಕು ಹಾಗೂ ನಗದು ರೂಪದಲ್ಲಿ ಪಾವತಿಸಿದರಷ್ಟೇ ಔಷಧಿಯ ಶಕ್ತಿ ಫಲಿಸುತ್ತದೆ ಎಂದು ಷರತ್ತು ವಿಧಿಸಿದ್ದರು.
ಟೆಕ್ಕಿ ದೇವರಾಜ್ ಬೂಟಿ ಎಂಬ ಔಷಧಿ ಖರೀದಿಸಿ ತಂದು ವಿಜಯ್ ಗುರೂಜಿಯನ್ನ ಭೇಟಿಯಾಗಿದ್ದರು. ಇದಾದ ಬಳಿಕ ಬೇರೆ ಬೇರೆ ಔಷಧ, ತೈಲದ ಹೆಸರಿನಲ್ಲಿ ನಕಲಿ ಗುರೂಜಿ ಹಣ ಪೀಕಿದ್ದರು. ಖರೀದಿಗೆ ಹಣವಿಲ್ಲವೆಂದಾಗ ‘ಇಲ್ಲಿಯವರೆಗೆ ನೀಡಿರುವ ಚಿಕಿತ್ಸೆ ಫಲಕಾರಿ ಆಗುವುದಿಲ್ಲವೆಂದು’ ಹೆದರಿಸಿದ್ದರು. ಇದರಿಂದ ಆತಂಕಗೊಂಡ ದೂರುದಾರ ಸಾಲ ಮಾಡಿ ಒಟ್ಟು 48 ಲಕ್ಷ ಹಣವನ್ನು ವಿಜಯ್ ಗುರೂಜಿಗೆ ನೀಡಿದ್ದರು. ಇದರಿಂದ ಯಾವುದೇ ಪ್ರಯೋಜನವಾಗದಿದ್ದಾಗ, ಇನ್ನೂ ಹೆಚ್ಚು ಚಿಕಿತ್ಸೆಯ ಅಗತ್ಯವಿದೆ, ಇಲ್ಲದಿದ್ದರೆ ಜೀವಕ್ಕೆ ತೊಂದರೆಯಾಗುತ್ತದೆ ಎಂದು ಪ್ರತಿದಿನ ನಕಲಿ ಗುರೂಜಿ ಬೆದರಿಕೆ ಹೆದರಿಸಲು ಆರಂಭಿಸಿದರು.
ಈ ನಡುವೆ ಅನಾರೋಗ್ಯಕ್ಕೆ ಒಳಗಾದ ದೂರುದಾರ ರಕ್ತವನ್ನು ತಪಾಸಣೆ ಮಾಡಿಸಿದಾಗ ಕಿಡ್ನಿಗೆ ಹಾನಿಯಾಗಿರುವುದು ತಿಳಿದು ಬಂದಿದೆ. ವಂಚನೆಗೆ ಒಳಗಾಗಿರುವುದು ಮನಗಂಡ ಟೆಕ್ಕಿ ವಿಜಯ್ ಗುರೂಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹಾಗೂ ರಸ್ತೆ ಪಕ್ಕದಲ್ಲಿರುವ ನಕಲಿ ಟೆಂಟ್‌ಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ತಿಳಿಸಿದ್ದಾರೆ.



