ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದು, ಪ್ರಬಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೇ ಬೆಚ್ಚಿಬೀಳುವಂತಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಗೆ ವಿರೋಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಒಂದೇ ದಿನದಲ್ಲಿ 1.5 ಕೋಟಿ ಫಾಲೋವರ್ಸ್ ಗಳಿಸುವ ಮೂಲಕ ಇನ್ ಸ್ಟಾಗ್ರಾಂನಲ್ಲಿ ಕೇಂದ್ರದ ಆಡಳಿತರೂಢ ಬಿಜೆಪಿಯ ಅಧಿಕೃತ ಖಾತೆಯನ್ನೇ ಹಿಂದಿಕ್ಕಿದೆ.
ಸಮಾಜದ ಕೊಳೆ ತೆಗೆಯಲು ಬೇಕು ಜಿರಳೆ (ಕಾಕ್ರೋಚ್) ಎಂಬ ಘೋಷವಾಕ್ಯದೊಂದಿಗೆ ಶುರುವಾರ ಕಾಕ್ರೋಚ್ ಜನತಾ ಪಾರ್ಟಿಯ ಖಾತೆ ಇನ್‌ಸ್ಟಾಗ್ರಾಮ್ ಓಪನ್ 12 ಗಂಟೆಯಲ್ಲಿ 15 ದಶಲಕ್ಷ ಫಾಲೋವರ್ಸ್ ಪಡೆದಿದ್ದು, ಫಾಲೋವರ್ಸ್ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರುತ್ತಲೇ ಇದೆ.
ಬಿಜೆಪಿಯ ಅಧಿಕೃತ ಖಾತೆ @bjp4india ಸುಮಾರು 8.7 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಕಾಂಗ್ರೆಸ್‌ನ @incindia ಖಾತೆಗೆ ಸುಮಾರು 13.2 ಮಿಲಿಯನ್ ಫಾಲೋವರ್ಸ್ ಇದ್ದರೆ, ಆಮ್ ಆದ್ಮಿ ಪಕ್ಷದ ಖಾತೆಗೆ ಸುಮಾರು 1.9 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ. ಈ ಮೂರೂ ಪಕ್ಷಗಳ ಫಾಲೋವರ್ಸ್ ಸಂಖ್ಯೆಯನ್ನು ಕಾಕ್ರೋಚ್ ಜನತಾ ಪಾರ್ಟಿ ಕೆಲವೇ ದಿನಗಳಲ್ಲಿ ಹಿಂದಿಕ್ಕಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಯುವ ನಿರುದ್ಯೋಗಿ ಯುವಕರು ‘ಜಿರಳೆಗಳಂತೆ’ ಎಂದು ಟೀಕಿಸಿದ್ದರು. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ, ಇನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಇನ್ನು ಕೆಲವರು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಶುಕ್ರವಾರ ಕಿಡಿಕಾರಿದ್ದರು. ಅವರ ಹೇಳಿಕೆ ಖಂಡಿಸಿ ವಿಭಿನ್ನ ಹೆಸರಿನಲ್ಲಿ ಆರಂಭಿಸಿದ ಕಾಕ್ರೋಚ್ ಜನತಾ ಪಕ್ಷ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.
ಎಕ್ಸ್ ಖಾತೆಗೆ ನಿರ್ಬಂಧ!
ಭಾರತದಲ್ಲಿ ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆಯನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದ್ದು, ಇದೀಗ ಇನ್ ಸ್ಟಾಗ್ರಾಂ ನಿರ್ಬಂಧಕ್ಕೂ ಪ್ರಯತ್ನಗಳನ್ನು ನಡೆಸಿದೆ.
ಎಕ್ಸ್ ಖಾತೆಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಸ್ಥಾಪಕ ಅಭಿಜೀತ್ ದೀಪ್ಕೆ Cockroach ಈಸ್ ಬ್ಯಾಕ್” ಎಂಬ ಹೆಸರಿನಲ್ಲಿ ಮತ್ತೊಂದು ಖಾತೆ ಆರಂಭಿಸಿದ್ದಾರೆ.
“ನಿನ್ನೆ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಗಳು ನಡೆದಿದ್ದರಿಂದ ಇದನ್ನು ನಿರೀಕ್ಷಿಸಲಾಗಿತ್ತು. ಆದರೆ ಇದು ಸರ್ಕಾರದ ಸ್ವಯಂ-ಗುರಿಯಾಗಿದೆ. ಈಗ ಎಕ್ಸ್ ಖಾತೆಯಲ್ಲಿ ‘Cockroach Is Back’ ಎಂಬ ಹೊಸ ಖಾತೆಯನ್ನು ಪ್ರಾರಂಭಿಸಿದ್ದೇನೆ. ಈ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ.



