ಚಾಮುಂಡಿ ಬೆಟ್ಟದಲ್ಲಿ ಸೋಮವಾರ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಸೋಮವಾರ ಬೆಳಗ್ಗೆ ಬೆಟ್ಟದ ಮೂಲ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರಭಾಗಕ್ಕೆ ಉತ್ಸವದ ಮೂಲಕ ತರಲಾಯಿತು. ಶುಭ ಮುಹೂರ್ತದಲ್ಲಿ ರಥೋತ್ಸವಕ್ಕೆ ಯದುವೀರ್ ಚಾಲನೆ ಕೊಟ್ಟರು.
ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರೆ, ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಭಾಗವಹಿಸಿದ್ದರು.
ಚಾಮುಂಡೇಶ್ವರಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿದ್ದು, ದೇವಾಲಯವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು.
ನವರಾತ್ರಿಯ ನಂತರ ಬರುವ ಮಹಾರಥೋತ್ಸವದಲ್ಲಿ ಬೆಟ್ಟದ ಗ್ರಾಮಸ್ಥರು ಪಾಲ್ಗೊಂಡು ರಥ ಎಳೆದು, ಹಣ್ಣು, ಜವನ ಅರ್ಪಿಸುತ್ತಾರೆ. ಇಂದು ಬೆಟ್ಟದ ಜನತೆ ಮೂಲ ಚಾಮುಂಡಿ ತಾಯಿಯ ದರ್ಶನ ಪಡೆದು ಸಂಭ್ರಮಿಸಿದರು.
ಚಾಮುಂಡಿ ತಾಯಿಯ ರಥೋತ್ಸವ ಚೆನ್ನಾಗಿ ನಡೆಯಿತು. ಈ ವರ್ಷ ದಸರಾ ಕೂಡ ಚೆನ್ನಾಗಿ ಆಗಿದೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಯದುವೀರ್ ಒಡೆಯರ್ ಶುಭಕೋರಿದರು.
ಚಾಮುಂಡೇಶ್ವರಿಗೆ ಕುಶಾಲ ತೋಪು ಗೌರವ
ಜಂಬೂಸವಾರಿಯ ಸಂದರ್ಭದಲ್ಲಿ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿಗೆ ಗಣ್ಯರು ಪುಷಾರ್ಚನೆ ಮಾಡುವ ಸಂದರ್ಭದಲ್ಲಿ 21 ಸುತ್ತು ಕುಶಾಲ ತೋಪು ಸಿಡಿಸುವುದು ಪದ್ಧತಿ. ಅದೇ ರೀತಿ ಬೆಟ್ಟದಲ್ಲಿ ಮಹಾರಥೋತ್ಸವದ ಸಂದರ್ಭದಲ್ಲಿ ರಥೋತ್ಸವಕ್ಕೆ ರಾಜವಂಶಸ್ಥರು ಚಾಲನೆ ನೀಡುವ ಸಂದರ್ಭದಲ್ಲೂ ಫಿರಂಗಿದಳದ ಸಿಬ್ಬಂದಿ 21 ಸುತ್ತು ಕುಶಾಲತೋಪುಗಳನ್ನು ಸಿಡಿಸುತ್ತಾರೆ.



