ನೀನು ಕಪ್ಪಗೆ ಇದ್ದಿಯಾ, ಸುಂದರವಾಗಿರುವ ನನಗೆ ನಿನಗಿಂತ ಚೆನ್ನಾಗಿರೋನು ಬೇಕು ಎಂದು ಪ್ರಿಯಕರನ ಜೊತೆಗೂಡಿ ಗಂಡನನ್ನು ಪತ್ನಿ ಕೊಲೆಗೈದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.
ಗೋಂಡಿಖೇಡಾ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಮನೆಗೆ ನುಗ್ಗಿ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಪತ್ನಿ ಪ್ರಿಯಾಂಕ ದೂರು ನೀಡಿದ್ದಳು. ದೂರು ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ದೂರು ನೀಡಿದ ಪತ್ನಿಯೇ ಕೊಲೆಗಾರ್ತಿ ಎಂದು ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ.
ಗಂಡ ದೇವಕೃಷ್ಣ ಶವದ ಮುಂದೆ ಗೋಳಾಡಿ ನಾಟಕವಾಡಿದ್ದ ಪತ್ನಿ ಪ್ರಿಯಾಂಕ ನಂತರ ನಾಪತ್ತೆಯಾಗಿದ್ದಳು. ದೇವ್ ಕೃಷ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ಗಂಡ-ಹೆಂಡತಿ ನಡುವೆ ಪದೇಪದೆ ಮೈಬಣ್ಣದ ಕುರಿತು ಜಗಳ ಆಗುತ್ತಿತ್ತು ಎಂದು ಆರೋಪಿಸಿದ್ದರು.
ನೀನು ಕಪ್ಪಗೆ ಇದ್ದೀಯಾ. ಸುಂದರವಾಗಿರುವ ನೀನು ನನಗೆ ಒಳ್ಳೆಯ ಜೋಡಿ ಅಲ್ಲ ಎಂದು ಗಂಡನನ್ನು ಪ್ರಿಯಾಂಕ ನಿಂದಿಸುತ್ತಿದ್ದಳು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಪ್ರಿಯಾಂಕ ಮತ್ತು ಪ್ರಿಯಕರ ಕಮಲೇಶ್ 2020ರಿಂದಲೇ ಅಕ್ರಮ ಸಂಬಂಧ ಹೊಂದಿದ್ದರು. ಇಬ್ಬರೂ ಸೇರಿ ದರೋಡೆ ನಾಟಕವಾಡಿ ಗಂಡನ ಕೊಲೆಗೆ ಸಂಚು ರೂಪಿಸಿದ್ದರು. ಕಮಲೇಶ್ 1 ಲಕ್ಷ ಸುಪಾರಿ ನೀಡಿ ಸುರೇಂದ್ರ ಅವರನ್ನು ದರೋಡೆ ನೆಪದಲ್ಲಿ ಕೊಲೆ ಮಾಡಲು ಸೂಚಿಸಿದ್ದರು.
ಸಂಚಿನಂತೆ ಸುರೇಂದ್ರ ಹಾಗೂ ಸಹಚರರು ಮನೆಗೆ ನುಗ್ಗಿ ದೇವ್ ಕೃಷ್ಣನ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಮನೆಯಲ್ಲೇ ಇದ್ದ ಪ್ರಿಯಾಂಕಾ ಎಲ್ಲವನ್ನೂ ನೋಡಿದರೂ ಏನೂ ಆಗಿಲ್ಲವಂತೆ ಗಂಡನ ಶವದ ಮುಂದೆ ಕಣ್ಣೀರು ಹಾಕಿ ನಾಟಕವಾಡಿದ್ದಳು.
ಘಟನೆ ನಡೆದ 36 ಗಂಟೆಯಲ್ಲಿ ಪ್ರಕರಣ ಬೇಧಿಸಿದ ಪೊಲೀಸರು ಪ್ರಿಯಾಂಕಾ ಹಾಗೂ ಪ್ರಿಯಕರ ಕಲಮೇಶ್ ಅವರನ್ನು ಬಂಧಿಸಿದ್ದು, ಸುಪಾರಿ ಪಡೆದು ಕೊಲೆ ಮಾಡಿದ ಸುರೇಂದರ್ ಹಾಗೂ ಸಹಚರರ ಪತ್ತೆಗೆ ಬಲೆ ಬೀಸಿದ್ದಾರೆ.



